ಕಬ್ಬುಬೆಳೆಗಾರರಿಗೆ ರಾಜ್ಯ ಸರಕಾರವು ಘೋಷಿಸಿರುವ 125 ರೂಪಾಯಿ ಬೆಂಬಲ ಬೆಲೆಯಿಂದ ಅಸಮಾಧಾನಗೊಂಡಿರುವ ರೈತರು ಚಳುವಳಿಗೆ ಮುಂದಾಗಿದ್ದಾರೆ.
ಪ್ರತಿ ಟನ್ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ 811ರೂ.ಗಳ ಜೊತೆಗೆ 200ರೂ.ಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಕಬ್ಬು ಬೆಳೆಗಾರರು ಒತ್ತಾಯಿಸಿದ್ದು, ಇದೀಗ ರಾಜ್ಯ ಸರಕಾರ 125ರೂ. ಬೆಂಬಲ ಬೆಲೆಘೋಷಿಸಿರುವುದು ಕಬ್ಬು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿದೆ.
ಈ ಸಂಬಂಧ ರಾಜ್ಯ ಕಬ್ಬು ಬೆಳೆಗಾರರ ಸಂಘವು ಇನ್ನು ಮೂರು ದಿನಗಳ ಗಡುವು ನೀಡಿದ್ದು, ಅದರೊಳಗೆ ಬೆಂಬಲ ಬೆಲೆಯನ್ನು ಹೆಚ್ಚಿಸದಿದ್ದರೆ ತೀವ್ರ ರೀತಿಯಲ್ಲಿ ಚಳುವಳಿಗೆ ಇಳಿಯುವುದಾಗಿ ಘೋಷಿಸಿದೆ.
ಸರಕಾರದ ಈ ನಿರ್ಧಾರವನ್ನು ಖಂಡಿಸಿರುವ ರೈತ ಸಂಘ ಈಗಾಗಲೇ ಪ್ರತಿಭಟನೆಗೆ ಇಳಿದಿದ್ದು,ಮಂಗಳವಾರವೇ ಜೈಲ್‌ಭರೋ ಚಳುವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕೆ. ಎಸ್. ಪುಟ್ಟಣ್ಣಯ್ಯ ತಿಳಿಸಿದ್ದಾರೆ.
ಈ ಮಧ್ಯೆ ಘೋಷಿಸಿರುವ ಬೆಂಬಲ ಬೆಲೆಯನ್ನು ಸಕ್ಕರೆ ಕಾರ್ಖಾನೆ ಪಾವತಿಸಬೇಕು ಎಂದು ಸರಕಾರ ತಿಳಿಸಿದ್ದು, ಕಬ್ಬಿನ ಸಾಗಾಣಿಕೆಗೆ ಪ್ರತಿ ಕಿ.ಮೀ.ಗೆ ಎರಡು ರೂ. ಸಹಾಯಧನ ನೀಡುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.
|