ಮುಂಬರು ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಫೆಬ್ರವರಿ 24ರಂದು ರಾಜ್ಯದ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕನ್ನಡ ಹೋರಾಟ ಸಮಿತಿ, ಹಾಗೂ ಗಡಿ ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ವಾಟಾಳ್ ನಾಗರಾಜ್ ಈ ವಿಚಾರ ತಿಳಿಸಿದ್ದಾರೆ. ರಾಜ್ಯಕ್ಕೆ ರೈಲ್ವೆ ಇಲಾಖೆಯಿಂದ ಅನ್ಯಾಯವಾಗುತ್ತಿದೆ. ಹಲವು ವರ್ಷಗಳಿಂದ ರೈಲ್ವೆ ಯೋಜನೆಗಳು ಜಾರಿಯಾಗದೆ ನನೆಗುದಿಗೆ ಬಿದ್ದಿವೆ. ರಾಜ್ಯ ರೈಲ್ವೆ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತಿಳಿಸಿದರು.
ಈ ಸಂಬಂಧ ರಾಜ್ಯದ ನೂರಾರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ಎಲ್ಲ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಬೇಕು ಎಂದು ಅವರು ಕರೆ ನೀಡಿದರು.
ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ಹಾಗೂ ಈ ಬಗ್ಗೆ ಕನ್ನಡಿಗರನ್ನು 'ಕಚಡಾ ಮಂದಿ' ಎಂದು ತುಚ್ಛವಾಗಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವರು ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದರು.
|