ಹಲವು ವಿಘ್ನಗಳನ್ನು ಕಂಡ ಬಿಬಿಎಂಪಿಯ ಮಹತ್ವಾಕಾಂಕ್ಷಿ ಯೋಜನೆ, 72 ಗಂಟೆಯ ಕ್ಷಿಪ್ರ ನಿರ್ಮಾಣ ಖ್ಯಾತಿಯ ಅಂಡರ್‌ಪಾಸ್ ಕಾಮಗಾರಿ ಕೊನೆಗೂ ಮುಕ್ತಾಯಗೊಂಡು ಸಾರ್ವಜನಿಕರಿಗೆ ಮುಕ್ತವಾಗಿದೆ.
ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಅಂಡರ್ಪಾಸನ್ನು ಸಾರ್ವಜನಿಕರಿಗೆ ಅರ್ಪಿಸಲಿದ್ದು ಈಗಾಗಲೇ ಇದಕ್ಕೆ ಪೂರ್ವಭಾವಿಯಾಗಿ ಅಂಡರ್ಪಾಸ್ ಮೇಲ್ಭಾಗದಲ್ಲಿ ಹಾಗೂ ಕೆಳಗೆ ಪ್ರಾಯೋಗಿಕವಾಗಿ ವಾಹನಗಳ ಸಂಚಾರವನ್ನು ನಡೆಸಲಾಗಿದೆ. ಉದ್ಘಾಟನೆಯಾದ ನಂತರ ಕೆಲವೇ ಗಂಟೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಇದನ್ನು ಮುಕ್ತವಾಗಿಸುವ ವಿಶ್ವಾಸವನ್ನು ಬಿಬಿಎಂಪಿ ಈಗಾಗಲೇ ವ್ಯಕ್ತಪಡಿಸಿದೆ.
ಕೇವಲ 72 ಗಂಟೆಗಳಲ್ಲಿ ಮುಗಿಯುವ ಅಂಡರ್ಪಾಸ್ ಎಂಬ ಹೆಗ್ಗಳಿಕೆಯೊಂದಿಗೆ ಇದರ ನಿರ್ಮಾಣಕಾರ್ಯ ಪ್ರಾರಂಭವಾಯಿತು. ಆದರೆ ತೀರಾ ಹಳೆಯದಾದ ನೀರಿನ ಕೊಳವೆ, ತದನಂತರ ಅಂತರ್ಜಲ, ಮಣ್ಣು ಕುಸಿತ ಇವೇ ಮೊದಲಾದ ಸಮಸ್ಯೆಗಳ ಕಾರಣದಿಂದ ನಿರ್ಮಾಣಕಾರ್ಯದಲ್ಲಿ ವಿಳಂಬವಾಯಿತು.
ಇದರಿಂದಾಗಿ ಸಾರ್ವಜನಿಕರ ಟೀಕೆಗೊಳಗಾದಾಗ ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಸದರಿ ಅಂಡರ್ಪಾಸ್ ಬಳಿ ಜಮಾವಣೆಗೊಂಡು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಈ ಅಂಡರ್ಪಾಸ್ ಕಾಮಗಾರಿಕೆಗೆ ನೆರವಾಗಿದ್ದು ಎಲ್ಲರ ಗಮನ ಸೆಳೆದಿತ್ತು.
|