ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆದಷ್ಟು ಹೊಸಮುಖಗಳಿಗೆ ಆದ್ಯತೆ ನೀಡಲು ಕಾಂಗ್ರೆಸ್ ಉತ್ಸುಕವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ನಿಟ್ಟಿನಲ್ಲಿ 120ಕ್ಕೂ ಹೆಚ್ಚು ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ಹಂಚಲು ನಿರ್ಧರಿಸಲಾಗಿದೆ. ಕ್ಷೇತ್ರ ಪುನರ್ವಿಂಗಡಣೆಯ ಪ್ರಕ್ರಿಯೆಯ ಫಲಿತಾಂಶಗಳನ್ನು ನೋಡಿಕೊಂಡು ಈ ಕುರಿತು ಮುಂದುವರಿಯುವುದಾಗಿ ತಿಳಿಸಿದರು.
ದೇಶದ ಸಮಗ್ರತೆಗೆ ಭಂಗ ತಂದು ಭಯದ ವಾತಾವರಣವನ್ನು ನಿರ್ಮಿಸುವ ಉಗ್ರಗಾಮಿಗಳನ್ನು ಬಂಧಿಸಬೇಕು ಎಂಬುದೇನೋ ನಿಜ. ಆದರೆ ಈ ಭರದಲ್ಲಿ ಅಮಾಯಕರನ್ನು ಹಿಡಿದು ಶಂಕಿತ ಉಗ್ರರೆಂದು ಹಿಂಸಿಸುವುದು ತರವಲ್ಲ ಎಂದು ಖರ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಖ್ಯಾತ ಸಾಹಿತಿ ಡಾ| ಯು.ಆರ್.ಅನಂತಮೂರ್ತಿ ಹಾಗೂ ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ಕಟುಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅನಂತಮೂರ್ತಿ ಒಬ್ಬ ಘನತೆವೆತ್ತ ಸಾಹಿತಿ. ಬಿಜೆಪಿ ಅವರ ಕುರಿತು ಅಷ್ಟೊಂದು ಹಗುರವಾಗಿ ಮಾತನಾಡಬಾರದಿತ್ತು ಎಂದು ನುಡಿದರು.
|