ಜೈಲಿನಲ್ಲಿರುವ ಖೈದಿಗಳ ಪ್ರಕರಣಗಳ ವಿಚಾರಣೆಗಾಗಿ ಅಳವಡಿಸಲಾಗಿರುವ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಕ್ಕೆ ನಗರದ ಸಿಟಿ ಸಿವಿಲ್ ನ್ಯಾಯಾಲಯದ ಸಂಕೀರ್ಣದಲ್ಲಿ ಇಂದು ಚಾಲನೆ ನೀಡಲಾಯಿತು.
ಈ ವ್ಯವಸ್ಥೆಗೆ ಚಾಲನೆ ನೀಡಿದ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ದೂರದ ದೆಹಲಿ, ಪುಣೆ, ಹೈದರಾಬಾದ್, ಬಿಜಾಪುರ ಹಾಗೂ ಗುಲ್ಬರ್ಗಾ ಇವೇ ಮೊದಲಾದ ಬಂದೀಖಾನೆಗಳ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ ಸಂವಾದ ನಡೆಸಿದರು.
ಕೆಲವೊಂದು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಪ್ರಮುಖ ಖೈದಿಗಳನ್ನು ಕರೆತರುವಾಗ ಅವರ ಸುರಕ್ಷತೆ ಹಾಗೂ ನ್ಯಾಯಾಲಯದ ಕಲಾಪವನ್ನು ಸುಲಲಿತವಾಗಿ ನಡೆಸುವ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಗೆ ಚಾಲನೆ ನೀಡುವ ಈ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರುಮಠ್, ವಿ.ಗೋಪಾಲಗೌಡ ಸೇರಿದಂತೆ ಇನ್ನೂ ಅನೇಕ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
|