ಪ್ರವಾಸೋದ್ಯಮ ಇಲಾಖೆಯ ಪ್ರಸ್ತಾವನೆಯಂತೆ ಬೆಂಗಳೂರು ನಗರದಲ್ಲಿ ರಾತ್ರಿ ಒಂದು ಗಂಟೆಯ ತನಕವೂ ಪಬ್ ಹಾಗೂ ಬಾರ್‌ಗಳನ್ನು ತೆರೆದಿರುವುದಕ್ಕೆ ಗೃಹ ಇಲಾಖೆ ಅನುಮತಿ ನೀಡಿರುವುದನ್ನು ವ್ಯಾಪಕವಾಗಿ ವಿರೋಧಿಸಲಾಗಿದೆ. ಇದರಿಂದ ತಡರಾತ್ರಿ ನಗರಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಮರ್ಥಿಸಿದರೂ, ಇದರಿಂದ ಅಪಾಯ ಹೆಚ್ಚು ಎನ್ನುವ ಅಭಿಪ್ರಾಯವೇ ಅಧಿಕ.
ಈ ಸಂಬಂಧ ಅನೇಕ ಸಾಹಿತಿಗಳು, ವಿವಿಧ ಸಂಸ್ಥೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಣಯದಿಂದ ಅಪರಾಧಗಳ ಸಂಖ್ಯೆ ಹೆಚ್ಚುವುದಲ್ಲದೆ, ಹಲವು ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪುರುಷರು ಮಧ್ಯರಾತ್ರಿಯೊಳಗೆ ಮನೆ ಸೇರಬೇಕು. ಇಲ್ಲವಾದರೆ ಸಂಸಾರ ನೆಮ್ಮದಿಯಿಂದಿರುವುದು ಅಸಾಧ್ಯ. ಅಲ್ಲದೆ, ನಗರದಲ್ಲಿ ಅಪರಾಧಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಹಾಗೂ ಸಂಚಾರ ಸಮಸ್ಯೆಯೂ ಅಧಿಕವಾಗುತ್ತದೆ ಎಂಬದು ಮಾಜಿ ಸಚಿವೆ ಮೋಟಮ್ಮ ಪ್ರತಿಕ್ರಿಯಿಸಿದ್ದಾರೆ.
ಇದೊಂದು ದುರಂತ ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ ಮುಖ್ಯಮಂತ್ರಿ ಚಂದ್ರು, ಪೊಲೀಸ್ ಇಲಾಖೆ ಹಾಗೂ ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
|