ಮಾಜಿ ಸಚಿವ ವಿಶ್ವನಾಥ್ ತನ್ನ ಆತ್ಮಕಥೆ ಹಳ್ಳಿ ಹಕ್ಕಿಯ ಹಾಡು ಕೃತಿ ಬಿಡುಗಡೆಯ ಸಮಾರಂಭದಲ್ಲಿ ಚಮ್ಮಾರ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಿಶ್ವನಾಥ್ ಅವರಿಂದ ಯಾವುದೇ ಜಾತಿ ನಿಂದನೆ ಆಗಿಲ್ಲ. ಅವರ ವಿರುದ್ಧದ ಆರೋಪಗಳಿಗೆ ದಾವೆದಾರ ಲಿಂಗರಾಜು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂಬುದಾಗಿ ವಾದ ಮಂಡಿಸಿದ ವಿಶ್ವನಾಥ್ ಪರ ವಕೀಲ ಕೆ.ದಿವಾಕರ್ ಅವರ ವಾದವನ್ನು ಪರಿಗಣಿಸಿದ ನ್ಯಾಯಪೀಠ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.
ಮೈಸೂರಿನಲ್ಲಿ ತಮ್ಮ ಕೃತಿಯ ಕುರಿತು ಸಮರ್ಥನೆ ನೀಡುವಾಗ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಚಪ್ಪಲಿ ಹೊಲಿಯುವ ಚಮ್ಮಾರನೂ ಆತ್ಮಕಥೆ ಬರೆಯುವಾಗ ನಾನೇಕೆ ಬರೆಯಬಾರದು ಎಂದು ವಿಶ್ವನಾಥ್ ಹೇಳಿದ್ದರು ಎಂಬುದೇ ಈ ವಿವಾದಕ್ಕೆ ಕಾರಣವಾಗಿತ್ತು.
ಈ ಹೇಳಿಕೆಯಿಂದಾಗಿ ಚಮ್ಮಾರ ಜನಾಂಗಕ್ಕೆ ಅವಮಾನವಾಗಿದೆ ಎಂದು ಆರೋಪಿಸಿ ಲಿಂಗರಾಜುರವರು ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಿಸಿದ್ದರು ಮತ್ತು ಈ ಕುರಿತು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗಿತ್ತು. ಇದನ್ನು ಪ್ರಶ್ನಿಸಿದ್ದ ವಿಶ್ವನಾಥ್ ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಕೋರಿಕೆ ಸಲ್ಲಿಸಿದ್ದರು.
|