ವಿದ್ಯಾವಂತ ಸುಶಿಕ್ಷಿತ ಯುವಕರನ್ನೇ ಮುಸ್ಲಿಂ ಉಗ್ರಗಾಮಿಗಳು ತಮ್ಮ ಕಾರ್ಯಾಚರಣೆಗೆ ಬಳಸಿಕೊಳ್ಳಲಾರಂಭಿಸಿದ್ದು ಮತ್ತೊಮ್ಮೆ ದೃಢಪಟ್ಟಿದ್ದು, ಇದೀಗ ನಿಷೇಧಿತ ಸಿಮಿ ಸಂಘಟನೆಗೆ ಸೇರಿದ್ದ ಐಟಿ ಉದ್ಯೋಗಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಿಮಿ ಸಂಘಟನೆಯ ಶಂಕಿತ ಉಗ್ರಗಾಮಿ ಮಹಮದ್ ಯಾಹ್ಯಾ ಖಾನ್ ಕಮ್ಮಕುಟ್ಟಿ ಎಂಬಾತನನ್ನು ಸಿಒಡಿ ಪೊಲೀಸರು ಗುರುವಾರ ಗುರಪ್ಪನ ಪಾಳ್ಯದಿಂದ ಬಂಧಿಸಿದ್ದಾರಾದರೂ, ಆತನ ಕೆಲವು ಸಹಚರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮೂಲತಃ ಕೇರಳದ ಕಲ್ಲಿಕೋಟೆಯವನಾಗಿದ್ದು, ಜಿಇ ಸಾಫ್ಟ್‌ವೇರ್ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಾಫ್ಟ್‌ವೇರ್ ಕಂಪನಿಯು ಕೆಲವು ತಿಂಗಳ ಹಿಂದೆ ಆತನನ್ನು ಉಚ್ಚಾಟಿಸಿದ್ದು, ಅಂದಿನಿಂದ ಬೇರಾವುದೇ ಕೆಲಸವಿರಲಿಲ್ಲ.
ಯಾಹ್ಯಾನನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಗಿದ್ದು, ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆತನಿಂದ ಒಂದು ಹಾರ್ಡ್ ಡ್ರೈವ್ ಹಾಗೂ ಬ್ಯಾಂಕ್ ಖಾತೆಯ ವಿವರಗಳ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಂಧಿತನಾಗಿದ್ದ ಮತ್ತೊಬ್ಬ ಉಗ್ರಗಾಮಿ ಮಹಮದ್ ಆಸಿಫ್ ನೀಡಿದ ಮಾಹಿತಿಯ ಆಧಾರದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸಿಮಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಈತ ಅಸಾದುಲ್ಲಾ ಮತ್ತು ಆಸಿಫ್‌ಗೆ ಗುರು ಎಂದೂ ಹೇಳಲಾಗುತ್ತಿದ್ದು, ರಾಜ್ಯದ ಭಯೋತ್ಪಾದನಾ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದ ಎಂದು ಹೇಳಲಾಗಿದೆ.
ಇದರೊಂದಿಗೆ ರಾಜ್ಯದ ಪ್ರಧಾನವಾದ ವೈದ್ಯಕೀಯ, ಸಾಫ್ಟ್‌ವೇರ್ ಕ್ಷೇತ್ರಗಳಲ್ಲೂ ಭಯೋತ್ಪಾದಕರು ನುಸುಳಿಕೊಂಡಿರುವುದು ಶ್ರುತಪಟ್ಟಿದ್ದು, ಪೊಲೀಸರು ಮತ್ತಷ್ಟು ಕಟ್ಟೆಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಂಗಳೂರಿನ ಬಿಸ್ಮಿಲ್ಲಾ ನಗರದ ಬಾಡಿಗೆ ಮನೆಯೊಂದರಲ್ಲಿ ಗೆಳೆಯರೊಂದಿಗೆ ವಾಸವಾಗಿದ್ದ ಈತ ಕೆಲವೊಂದು ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ಎಂದು ತಿಳಿದುಬಂದಿದ್ದು, ಅವನ ಕೋಣೆಯಲ್ಲಿ ಈಗಾಗಲೇ ಸಿಕ್ಕಿರುವ ಜೆಹಾದಿ ಕುರಿತಾದ ಪುಸ್ತಕಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸಿವೆ.
ಈಗಾಗಲೇ ಈ ಕಾರ್ಯಾಚರಣೆಗೆ ರಾಜಕೀಯ ವಲಯದಿಂದ ಅಡ್ಡಿ ಆತಂಕಗಳು ಎದುರಾಗುವ ಅಭಿಪ್ರಾಯವಿದ್ದರೂ ಅದಕ್ಕೆ ಎದೆಗುಂದದ ಸಿಒಡಿ ಪೊಲೀಸರು ಯಾಹ್ಯಾನನ್ನು ಇಂದು ಹುಬ್ಬಳ್ಳಿಯ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
|