ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ತಾಣವಾಗುತ್ತಿರುವ ಸಿಲಿಕಾನ್ ಸಿಟಿ
ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಕರೆಸಿಕೊಳ್ಳುತ್ತಿರುವ ಬೆಂಗಳೂರು ಕ್ರಮೇಣ ಉಗ್ರರ ಅಡಗುತಾಣವಾಗಿ ಮಾರ್ಪಡುತ್ತಿದೆಯೇ ಎಂಬ ಸಂದೇಹ ಜನ ಸಾಮಾನ್ಯರನ್ನು ಕಾಡುತ್ತಿದೆ.

ತೊಂಭತ್ತರ ದಶಕದವರೆಗೂ ಬೆಂಗಳೂರು ಅತ್ಯಂತ ಸುರಕ್ಷಿತ ನಗರಗಳಲ್ಲೊಂದು ಎಂಬ ಭಾವನೆ ಎಲ್ಲರಲ್ಲೂ ಮನೆಮಾಡಿತ್ತು. ಆದರೆ ಇದು ಭಯೋತ್ಪಾದಕರಿಗೂ ಸುರಕ್ಷಿತ ತಾಣ ಎಂಬ ಸ್ಪೋಟಕ ಸುದ್ದಿ ಹೊರಬಿದ್ದಿದ್ದು ರಾಜೀವ್‌ಗಾಂಧಿಯವರ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಿವರಸನ್ ಬೆಂಗಳೂರಿನ ಕೋಣನಕುಂಟೆ ಬಡಾವಣೆಯಲ್ಲಿದ್ದು ನಂತರ ಮೃತಪಟ್ಟಾಗ. ಇದಾದ ನಂತರ ತಮಿಳು ಉಗ್ರರನ್ನು ಪತ್ತೆ ಹಚ್ಚುವ ಅದೇಷ್ಟೋ ಪ್ರಯತ್ನಗಳು ನಡೆದವಾದರೂ ಕ್ರಮೇಣ ಜನ ಅದನ್ನು ಮರೆತೇ ಬಿಟ್ಟಿದ್ದರು.

ಆದರೆ ಈಗ ಶಂಕಿತ ಉಗ್ರ ಆಸೀಫ್ ಒಂದೊಂದೇ ಮಾಹಿತಿಗಳನ್ನು ಬಾಯಿಬಿಡುತ್ತಿದ್ದು ಮೊನ್ನೆಯಷ್ಟೇ ಮತ್ತೊಬ್ಬ ಶಂಕಿತ ಉಗ್ರ ಯಾಹ್ಯಾಖಾನ್ ಸೆರೆ ಸಿಕ್ಕಿದ್ದನ್ನು ನೋಡಿದರೆ ಮತ್ತು ಈತ ಬಹಳ ದಿನಗಳಿಂದ ನಿಷೇಧಿತ ಸಿಮಿ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದು ಗುಪ್ತ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿರುವುದನ್ನು ನೋಡಿದರೆ ಉಗ್ರರ ಕಬಂಧ ಬಾಹು ಎಲ್ಲಿಯವರೆಗೂ ಚಾಚಿರಬಹುದು ಎಂಬ ಭಯ ಮೂಡುತ್ತಿದೆ.

ಆದರೆ ಇಷ್ಟಿದ್ದೂ ಸಹ, ಕರ್ನಾಟಕದಲ್ಲಿ ಭಯೋತ್ಪಾದಕರಿರುವುದು ಬರೀ ವದಂತಿ ಎಂದು ರಾಜ್ಯ ಎಡಿಜಿಪಿ ಶಂಕರ ಬಿದರಿಯವರು ಬಳ್ಳಾರಿಯಲ್ಲಿ ನೀಡಿರುವ ಬೇಜವಾಬ್ದಾರಿತನದ ಹೇಳಿಕೆಯ ಬಗೆಗೆ ಸಾರ್ವಜನಿಕರಷ್ಟೇ ಏಕೆ ಕೆಲ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳೂ ಆಕ್ಷೇಪವೆತ್ತಿದ್ದಾರೆ. ಎಲ್ಲಾ ವಿದ್ಯಮಾನಗಳನ್ನೂ ಮಾಧ್ಯಮಗಳ ಮೂಲಕ ಜನ ನೋಡುತ್ತಿದ್ದಾರೆ. ಉಗ್ರರ ಚಟುವಟಿಕೆಗಳಲ್ಲಿ ಐಎಸ್ಐ ಕೈವಾಡ ಸ್ಪಷ್ಟವಾಗಿ ಎದ್ದು ಕಾಣುತ್ತಿರುವಾಗ ಅಂಥಾದ್ದೇನೂ ಇಲ್ಲ ಎಂದು ಹೇಳುವುದು ಕುರುಡುತನ ಎಂಬುದು ಈ ಅಧಿಕಾರಿಗಳ ಅಭಿಪ್ರಾಯ.

ಒಟ್ಟಿನಲ್ಲಿ ಚುನಾಯಿತ ಜನಪ್ರಿಯ ಸರ್ಕಾರವಿಲ್ಲದಿರುವ ಇಂಥ ಅತಂತ್ರ ಪರಿಸ್ಥಿತಿಯಲ್ಲಿಯೇ ಉಗ್ರರ ಚಟುವಟಿಕೆಗಳೂ ಕಂಡುಬಂದಿರುವುದು ರಾಜ್ಯದ ಸದ್ಯದ ಆಡಳಿತಾತ್ಮಕ ಅಸ್ತವ್ಯಸ್ತತೆಗೆ ಹಿಡಿದ ಕೈಗನ್ನಡಿಯಾಗಿದೆ.
ಮತ್ತಷ್ಟು
ಮಾರ್ಚ ಆರರವರೆಗೆ ಪೊಲೀಸ್ ವಶಕ್ಕೆ ಯಾಹ್ಯಾ
ವಿಮಾನ ನಿಲ್ದಾಣದಲ್ಲಿ ಕರವೇ ದಾಂಧಲೆ
ಶಿವಮೊಗ್ಗ: ಎರಡೂ ಸ್ಥಾನಗಳು ಬಿಜೆಪಿಗೆ
ರಾಮನಗರದಿಂದ ಸ್ಪರ್ಧೆಗೆ ಡಿಕೆಶಿ ಒಲವು
ಕ್ಷೇತ್ರ ಮರುವಿಂಗಡಣೆ ಯುಪಿಎ ಸಾಧನೆ : ಸಿದ್ದು
ನಾಳೆ ಹಾಕ್ ಯುದ್ಧ ವಿಮಾನ ರಾಷ್ಟ್ರಕ್ಕೆ ಸಮರ್ಪಣೆ