ಲಾರಿ ಹಾಗೂ ಖಾಸಗಿ ವಾಹನಗಳ ಮಾಲೀಕರು ನಡೆಸುತ್ತಿರುವ ಮುಷ್ಕರ ಎರಡನೆ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.
ಹೊರರಾಜ್ಯದಿಂದ ಬರುವ ವಾಹನಗಳನ್ನು ತಡೆಯೊಡ್ಡುವ ಹಾಗಿಲ್ಲ ಎಂದು ಹೇಳಿರುವ ಸರ್ಕಾರ, ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಇಲಾಖೆ ಲಾರಿ ಹಾಗೂ ಖಾಸಗಿ ವಾಹನಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟ ಪಡಿಸಿದ್ದು, ಜನಜೀವನ ಸಾಮಾನ್ಯ ಪರಿಸ್ಥಿತಿಗೆ ಬಂದ ಮೇಲೆ ಒಕ್ಕೂಟ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಿ ಎಂದು ಅದು ತಿಳಿಸಿದೆ.
ಈ ಮಧ್ಯೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟವು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದೆ. ತಮ್ಮ ಬೇಡಿಕೆಗೆ ನ್ಯಾಯಾಲಯ ಸ್ಪಂದಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರದಲ್ಲಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಲಿದೆ.
ಹೈಕೋರ್ಟ್ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತಾರಕನ್ ಲಾರಿ ಮಾಲೀಕರ ಒಕ್ಕೂಟಕ್ಕೆ ಸಲಹೆ ನೀಡಿದ್ದಾರೆ. ಆದರೆ ಆದೇಶವನ್ನು ಹಿಂತೆಗೆಯುವರೆಗೂ ಮುಷ್ಕರವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಲಾರಿ ಮಾಲೀಕರ ಸಂಘ ಪ್ರತಿಯಾಗಿ ತಿಳಿಸಿದೆ.
|