ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣದ ಹುದ್ದೆಗಳಿಗೆ ಕನ್ನಡಿಗರನ್ನು ಆಯ್ಕೆ ಮಾಡದಿದ್ದರೆ ಮಾರ್ಚ್ 28ರಂದು ನಡೆಯಲಿರುವ ಉದ್ಘಾಟನೆಯನ್ನು ತಡೆಹಿಡಿಯುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ನೂತನ ನಿಲ್ದಾಣದಲ್ಲಿ ಸುಮಾರು 12,000 ಹುದ್ದೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು. ಅದು ಬಿಟ್ಟು ಅನ್ಯ ರಾಜ್ಯದವರಿಗೆ ಮಣೆ ಹಾಕಿದರೆ ಉಗ್ರ ರೀತಿಯಲ್ಲಿ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಬಣದ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ತಿಳಿಸಿದ್ದಾರೆ.
ಈ ನೂತನ ನಿಲ್ದಾಣಕ್ಕಾಗಿ ಬಿಐಎಎಲ್ ರೈತರಿಂದ ಕಡಿಮೆ ದರದಲ್ಲಿ ಸಾವಿರಾರು ಎಕರೆ ಜಮೀನು ಪಡೆದುಕೊಂಡು, ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಈ ಆಶ್ವಾಸನೆಯನ್ನು ಪಾಲಿಸದೆ ಬಿಐಎಎಲ್ ಮೋಸ ಮಾಡಿದೆ ಎಂದು ಅವರು ತಿಳಿಸಿದರು.
ಮುಂದಿನ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿ, ಹಣ ಬಿಡುಗಡೆ ಮಾಡಬೇಕು ಹಾಗೂ ಕನಿಷ್ಠ ರಾಜ್ಯದಲ್ಲಿ 4 ರೈಲು ಮಾರ್ಗಗಳ ಸಂಚಾರವನ್ನು ಕಲ್ಪಿಸಬೇಕು ಎಂದು ನಾರಾಯಣ ಗೌಡ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದರು.
|