ವಾಹನಗಳಲ್ಲಿ ವೇಗ ನಿಯಂತ್ರಕ ಅಳವಡಿಕೆ ಕುರಿತು ಲಾರಿ ಮಾಲೀಕರು ಹಾಗೂ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳ ಮಾಲೀಕರ ನಡುವೆ ಭಿನ್ನಾಭಿಪ್ರಾಯವೆದ್ದಿದ್ದರಿಂದ ಟ್ಯಾಕ್ಸಿ ನಿರ್ವಾಹಕರು ಮುಷ್ಕರ ಕೈಬಿಡುವ ಬಗ್ಗೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ನಿರ್ವಾಹಕರು ಸೋಮವಾರ ರಸ್ತೆಗಿಳಿಯಲು ನಿರ್ಧರಿಸಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ಕ್ಯಾಬ್ ಸಂಘಟನೆಗಳು ತಮಗೆ ಸರಕಾರ ರಕ್ಷಣೆ ನೀಡಿದರೆ ರಸ್ತೆಗಿಳಿಯುವುದಾಗಿ ಘೋಷಿಸಿವೆ. ಭಿನ್ನಾಭಿಪ್ರಾಯಕ್ಕೆ ಮೂಲ ಕಾರಣ ದೊರೆತಿಲ್ಲವಾದರೂ, ಗ್ರಾಹಕರ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಘೋಷಿಸಿದೆ.
ಈ ಮಧ್ಯೆ ಲಾರಿ ಮಾಲೀಕರ ಸಂಘ ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲಾರಿ, ಖಾಸಗಿ ಬಸ್ ಹಾಗೂ ಇನ್ನಿತರ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ವಿಚಾರಣೆಯವರೆಗೆ ಮುಷ್ಕರವನ್ನು ಮುಂದುವರೆಸಲು ನಿರ್ಧರಿಸಿವೆ.
ಆದರೆ ಲಾರಿ ಮುಷ್ಕರದಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರಿಂದ ಜನರಲ್ಲಿ ಆತಂಕ ಮೂಡಿಸಿದ್ದು, ಮುಷ್ಕರದ ಬಗ್ಗೆ ಅಸಮಾಧಾನ ಕಂಡು ಬಂದಿದೆ. ಈ ನಡುವೆ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳು ರಸ್ತೆಗಿಳಿಯುವುದರಿಂದ ಐಟಿಬಿಟಿ ಹಾಗೂ ಖಾಸಗಿ ಉದ್ಯೋಗಸ್ಥರ ಆತಂಕ ದೂರವಾಗಿದೆ.
|