ಶ್ರೀಶೈಲ ದೇವಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ದಾರಿತಪ್ಪಿ ದಟ್ಟ ಅರಣ್ಯದಲ್ಲಿ ಕಳೆದುಹೊಗಿದ್ದ ಸುಮಾರು 16 ಜನ ಯಾತ್ರಿಕರನ್ನು ಆಂಧ್ರ ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪಾದಯಾತ್ರೆಯ ಮೂಲಕ ಶ್ರೀಶೈಲ ದೇವಾಲಯಕ್ಕೆ ಫೆಬ್ರವರಿ 18ರಂದು ಯಾತ್ರೆ ಕೈಗೊಂಡಿದ್ದ ಗುಲ್ಬರ್ಗಾ ಜಿಲ್ಲೆಯ ಯಾತ್ರಿಕರು ದಾರಿ ತಪ್ಪಿ ಫೆ.21ರಿಂದ ಕುಟುಂಬದವರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಕಳೆದ ಏಳು ದಿನಗಳಿಂದ ಆಹಾರವಿಲ್ಲದೆ, ಕಾಡಿನಲ್ಲಿಯೇ ಉಳಿದುಕೊಂಡಿದ್ದ ಯಾತ್ರಿಕರು ಸುರಕ್ಷಿತವಾಗಿ ತಲುಪುವಂತೆ ಆಂಧ್ರ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಯಾತ್ರಿಕರ ಕುಟುಂಬ ತಿಳಿಸಿದೆ.
ಸಂಪರ್ಕ ಕಳೆದುಕೊಂಡ ಯಾತ್ರಿಕರ ಕುಟುಂಬದವರು ನೀಡಿದ ಮಾಹಿತಿಯಂತೆ ಕೂಡಲೇ ಕಾರ್ಯಾಚರಣೆಗೆ ಇಳಿದ ಆಂಧ್ರ ಪೊಲೀಸರು ಮೊದಲು ಹೆಲಿಕಾಫ್ಟರ್ ಮೂಲಕ ಆಹಾರ ರವಾನೆ ಮಾಡಿದರು. ಬಳಿಕ ಪೊಲೀಸರ ತೀವ್ರ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಹೆಲಿಲಿಫ್ಟಿಂಗ್ ಮೂಲಕ ಕರೆತರಲಾಯಿತು ಎಂದು ತಿಳಿದು ಬಂದಿದೆ.
ಕೂಡಲೇ ಯಾತ್ರಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸುದ್ದಿ ತಿಳಿದ ಕುಟುಂಬದವರು ಸಂತೋಷದಿಂದ ಸಂಭ್ರಮಿಸಿದರು. ಅಲ್ಲದೆ, ಯಾತ್ರಿಕರನ್ನು ಶ್ರೀಶೈಲಕ್ಕೆ ಕರೆತರಲಾಗಿದ್ದು, ದೇವರ ದರ್ಶನಕ್ಕೆ ವಿಶೇಷ ಏರ್ಪಾಡು ಮಾಡಲಾಗಿದೆ.
|