ರಾಜ್ಯದ ಅಭಿವೃದ್ಧಿಗೆ ಬದಲಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ತಾಳಕ್ಕೆ ತಕ್ಕಂತೆ ನಡೆಯುತ್ತಿದ್ದು, ಇದು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. "ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಈ ಕಾರ್ಯವೈಖರಿಗೆ ಕಾಂಗ್ರೆಸ್ ಮುಖಂಡರೇ ಕಾರಣವಾಗಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಧೋರಣೆ ಹಾಗೂ ರಾಜ್ಯದಲ್ಲಿ ಹಿಂದಿನಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ತಂತ್ರಕ್ಕೆ ತಡೆನೀಡುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರಿಗೆ ದೂರು ನೀಡಲಾಗುವುದು" ಎಂದು ತಿಳಿಸಿದರು.
ರಾಷ್ಟ್ರಪತಿ ಆಳ್ವಿಕೆಯ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಅನೇಕ ಅಭಿವೃದ್ಧಿ ಕಾರ್ಯ ಕುಂಠಿತವಾಗಿದ್ದು, ಸಾವಿರಾರು ಕಡತಗಳು ಧೂಳು ತಿನ್ನುತ್ತಿವೆ ಎಂದು ಅವರು ಆರೋಪಿಸಿದರು.
ಅಲ್ಲದೆ, ಯೋಜನೆಗಳಿಗೆ ಹಿಂದಿನ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣದ ಪೈಕಿ ಇದುವರೆಗೂ ಶೇ.50ರಷ್ಟೂ ವಿನಿಯೋಗವಾಗದಿರುವುದು ವಿಷಾದದ ಸಂಗತಿ. ಇಂತಹ ಯೋಜನೆಗಳನ್ನು ರಾಜ್ಯಪಾಲರು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಲು ಯತ್ನಿಸುತ್ತಿಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.
|