ಮಹಾರಾಷ್ಟ್ರ ರಾಜ್ಯಪಾಲರ ಎಸ್. ಎಂ.ಕೃಷ್ಣರವರು ರಾಜ್ಯ ರಾಜಕೀಯ ಮರಳುತ್ತಿದ್ದಾರೆಂಬ ವಿಚಾರವು ಭಾರೀ ಪ್ರಾಮುಖ್ಯತೆ ಪಡೆಯುತ್ತಿರುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಬಿಜೆಪಿ ತೊರೆದಿರುವ ಮಾಜಿ ಶಾಸಕ ಪಾಪಣ್ಣರವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಮುಖಂಡರು ರಾಜ್ಯಪಾಲರಾಗಿ ಮತ್ತೆ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಇದೊಂದು ಸಾಮಾನ್ಯ ಬೆಳವಣಿಗೆಯಾಗಿದೆ. ಆದರೆ ಕೃಷ್ಣರವರ ವಿಚಾರದಲ್ಲಿ ಯಾಕೆ ಇಷ್ಟು ಪ್ರಚಾರ ನೀಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.
ಎಸ್.ಎಂ.ಕೃಷ್ಣರವರ ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ಪಕ್ಷದಲ್ಲಿ ಪರ ವಿರೋಧ ಗೊಂದಲಗಳು ಏನಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಖರ್ಗೆ ಪುನರುಚ್ಚರಿಸಿದರು.
ರಾಜ್ಯದಲ್ಲಿ ಬಾಕಿ ಇರುವ ರೈಲ್ವೆ ಯೋಜನೆಗಳ ಅನುಷ್ಠಾನ ಹಾಗೂ ರಾಜ್ಯಕ್ಕೆ ಹೆಚ್ಚಿನ ಹಣ ಒದಗಿಸುವಂತೆ ರೈಲ್ವೆ ಸಚಿವರಿಗೆ ರಾಜ್ಯ ಕಾಂಗ್ರೆಸ್ ಪತ್ರ ಬರೆದಿದೆ ಎಂದು ರೈಲ್ವೆ ಬಜೆಟ್ ಕುರಿತು ಮಾತನಾಡಿದ ಖರ್ಗೆ, ಹಿಂದಿನ ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ರಾಜ್ಯದ ಭೇಟಿಯ ಸಂದರ್ಭದಲ್ಲಿ ಸಚಿವರಿಗೆ ಮನವರಿಕೆ ಮಾಡಲಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
|