ಜಾತ್ಯಾತೀತ ಜನತಾದಳದ ರಾಜ್ಯ ಕಾರ್ಯಕಾರಿಣಿ ಸಭೆ ಮಂಗಳವಾರ ಅರಮನೆ ಮೈದಾನದಲ್ಲಿ ನಡೆಯಲಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ಪೂರ್ವ ತಯಾರಿಯಾಗಿ ನಡೆಸಲಾಗುವ ಈ ಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ, ಪಕ್ಷದ ಮುಂದಿರುವ ಸವಾಲು ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಸಭೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪಕ್ಷ ಮುಂದೆ ನಡೆಸಬೇಕಾಗಿರುವ ಕಾರ್ಯತಂತ್ರ ಹಾಗೂ ಅನುಸರಿಸಬೇಕಾಗಿರುವ ನಿಯಮ ನಿಬಂಧನೆಗಳನ್ನು ಚರ್ಚಿಸಲಿದೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ. ಈ ಮಧ್ಯೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಅಭ್ಯರ್ಥಿಗೆ ಪಕ್ಷದ ಕುರಿತು ಇರುವ ಅನಿಸಿಕೆಗಳನ್ನು ತಿಳಿಯಲು ಪರೀಕ್ಷೆಯೊಂದನ್ನು ನಡೆಸಲು ಜೆಡಿಎಸ್ ತೀರ್ಮಾನಿಸಿದೆ.
|