ಖಾಸಗಿ ವಾಹನಗಳಲ್ಲಿ ವೇಗ ನಿಯಂತ್ರಕ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ಹೈಕೋರ್ಟ್ ಆದೇಶಕ್ಕೆ ಸುಪ್ರಿಂಕೋರ್ಟ್ ಮಂಗಳವಾರ ತಡೆ ನೀಡಿದ್ದು, ಈ ಹಿನ್ನಲೆಯಲ್ಲಿ ಲಾರಿ ಮಾಲೀಕರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ.
ಲಾರಿ ಮಾಲೀಕರು ಹೈಕೋರ್ಟ್ ಮನವಿಯನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ಇದರಿಂದ ಲಾರಿ ಮಾಲೀಕರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದು, ಈ ಬಗ್ಗೆ ಮಂಗಳವಾರ ನಡೆಸಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಲಾರಿ ಒಕ್ಕೂಟದ ಸ್ಥಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಮುಷ್ಕರವನ್ನು ಹಿಂತೆಗೆದುಕೊಂಡಿದ್ದರಿಂದ ಅಗತ್ಯ ವಸ್ತುಗಳ ಬೆಲೆಗಳು ಸಹಜ ಸ್ಥಿತಿಯತ್ತ ಮರಳುವ ಸಾಧ್ಯತೆಗಳು ಕಂಡು ಬಂದಿದ್ದು, ಸಾರ್ವಜನಿಕರು ಉಸಿರಾಡುವಂತಾಗಿದೆ. ಅಲ್ಲದೆ, ಸರಕು ಸಾಗಣಿಕೆಗಳು ಮತ್ತೆ ಎಂದಿನಂತೆ ನಡೆಯಬಹುದಾಗಿದೆ.
ಲಾರಿ ಹಾಗೂ ಇತರ ಖಾಸಗಿ ವಾಹನದ ಮಾಲೀಕರು ವೇಗ ನಿಯಂತ್ರಕ ಅಳವಡಿಕೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಹೈಕೋರ್ಟ್ ಆದೇಶಿಸಿತ್ತು. ಇದರಿಂದ ಅಸಮಾಧಾನಗೊಂಡ ಲಾರಿ ಮಾಲೀಕರು ಹಾಗೂ ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಸೇರಿದಂತೆ ಇತರ ಖಾಸಗಿ ವಾಹನಗಳು ಈ ತಿಂಗಳ 22ರ ಮಧ್ಯರಾತ್ರಿಯಿಂದ ಮುಷ್ಕರಕ್ಕೆ ಇಳಿದಿದ್ದವು. ಈ ಮಧ್ಯೆ ರಾಜ್ಯ ಸರಕಾರದ ಮಧ್ಯಸ್ಥಿಕೆಯಿಂದ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಮಾಲೀಕರು ಮುಷ್ಕರವನ್ನು ಹಿಂತೆಗೆದುಕೊಂಡಿದ್ದವು. ಆದರೆ ವೇಗನಿಯಂತ್ರ ಅಳವಡಿಕೆ ಕಡ್ಡಾಯ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಲಾರಿ ಮಾಲೀಕರು ಮುಷ್ಕರವನ್ನು ಮುಂದುವರೆಸಿದ್ದರು. ಇದೀಗ ಅವರಿಗೆ ಪರವಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದಿದೆ.
|