ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರನೊಬ್ಬನ ಮೇಲೆ ಸಂಚಾರಿ ಸಹಾಯಕ ಇನ್‌ಸ್ಪೆಕ್ಟರ್‌ಗೆ ನಡೆಸಿದ ಹಲ್ಲೆಯನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ದೇವರಾಜ ಅರಸು ರಸ್ತೆಯಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ.
ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ದ್ವಿಚಕ್ರ ವಾಹನ ಚಾಲಕನನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿದ ಟ್ರಾಫಿಕ್ ಇನ್‌ಸ್ಪೆಕ್ಟರ್ ಮಹದೇವಪ್ಪ ಹಾಗೂ ಅವರ ಜತೆಗಿದ್ದ ಪೇದೆ ರಹೀಂ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಇನ್‌ಸ್ಪೆಕ್ಟರ್ ನಡುವೆ ಮಾತಿನ ಚಕಮಕಿ ಪ್ರಾರಂಭಗೊಂಡಿತು. ಅಲ್ಲದೆ, ಕೋಪಗೊಂಡ ಸಾರ್ವಜನಿಕರು ಇನ್‌ಸ್ಪೆಕ್ಟರ್‌ಗೆ ಧರ್ಮದೇಟು ನೀಡಿದ್ದಾರೆ ಎಂದೂ ಹೇಳಲಾಗಿದೆ. ಬಳಿಕ ಉದ್ವಿಗ್ನಗೊಂಡ ಸಾರ್ವಜನಿಕರು ಸಮಾಜವಾದಿ ಮುಖಂಡ ಕರುಣಾಕರ ನೇತೃತ್ವದಲ್ಲಿ ಮಹದೇವಪ್ಪ ಹಾಗೂ ರಹೀಂನನ್ನು ಅಮಾನತುಗೊಳಿಸಬೇಕೆಂದು ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಈ ಸಂಬಂಧ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹಿರಿಯ ಸಂಚಾರಿ ಡಿಸಿಪಿ ಶಿವಲಿಂಗಪ್ಪ ಪ್ರತಿಭಟನೆಕಾರರ ಮನವೊಲಿಸಿ ಲಿಖಿತ ರೂಪದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡರಾದರೂ, ಬಳಿಕ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರೆನ್ನಲಾಗಿದೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿದೆ.
|