ಮಹತ್ವದ ಬೆಳವಣಿಗೆಯೊಂದರಲ್ಲಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ ತೆರಳಿದೆ. ಕಾಂಗ್ರೆಸ್‌ನ ಈ ದಿಢೀರ್ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಲಾಲೂ ಮಂಡಿಸಿರುವ ರೈಲ್ವೆ ಬಜೆಟ್ ಕುರಿತು ರಾಜ್ಯ ಕಾಂಗ್ರೆಸ್ ನಾಯಕರಿಗೆ ಅಸಮಾಧಾನವಿದ್ದು, ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮಾತುಕತೆ ಸಂದರ್ಭದಲ್ಲಿ ಚರ್ಚೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ನಿಯೋಗದಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಹಲವು ನಾಯಕರು ದಿಲ್ಲಿಗೆ ತೆರಳಿದ್ದು, ಕ್ಷೇತ್ರ ಪುನರ್ ವಿಂಗಡಣೆ, ಚುನಾವಣೆ ರೂಪುರೇಷೆಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಬೆಳವಣಿಗೆಯು ಶೀಘ್ರ ಚುನಾವಣೆ ಬಗ್ಗೆ ಎದ್ದಿರುವ ಗೊಂದಲಕ್ಕೆ ಹೊಸ ತಿರುವು ನೀಡಿದೆ.
ಈ ಸಂಬಂಧ ಬುಧವಾರ ನಡೆಯುವ ಸಭೆಯಲ್ಲಿ ರಾಜ್ಯ ಕಾಂಗ್ರೆಸಿಗರು ಮೊದಲು ಪೃಥ್ವಿರಾಜ್ ಚೌಹಾಣ್ ಜೊತೆ ಮಾತುಕತೆ ನಡೆಸಿದ ಬಳಿಕ ಕೇಂದ್ರದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
|