ಹೊಗೇನಕಲ್ ನದಿಗಡ್ಡವಾಗಿ ತಮಿಳುನಾಡು ಸರಕಾರ ಆಕ್ರಮವಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವುದನ್ನು ಕನ್ನಡ ನುಡಿ-ಗಡಿ ಜಾಗೃತಿ ಜಾಥ ಸಮಿತಿ ಖಂಡಿಸಿದೆ.
ರಾಜ್ಯದಲ್ಲಿ ಕುಡಿಯುವ ನೀರಿನ ಉದ್ದೇಶದ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಮುಂದಾದಾಗ ನದಿಗಳು ರಾಷ್ಟ್ರದ ಸಂಪತ್ತು ಎಂದು ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ ಪ್ರಸ್ತುತ ತಮಿಳುನಾಡು ಸರಕಾರ ಕಾನೂನು ಬಾಹಿರವಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ ಎಂದು ಸಮಿತಿ ಆರೋಪಿಸಿದೆ.
ಈ ಸಂಬಂಧ ಕನ್ನಡ ಹೋರಾಟ ಸಮಿತಿ ಮಂಗಳವಾರ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ತಮಿಳುನಾಡು ಯೋಜಿಸಿರುವ ಯೋಜನೆಗೆ ಅವಕಾಶ ನೀಡಬಾರದೆಂದು ಸರಕಾರಕ್ಕೆ ಮನವಿ ಮಾಡಿದೆ. ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಹಾಗೂ ಸಮಿತಿಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
"ಅಕ್ರಮವಾಗಿ ರಾಜ್ಯದ ನೀರನ್ನು ಬಳಸಿಕೊಂಡು ತಮಿಳುನಾಡು ಅಣೆಕಟ್ಟು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟಕ್ಕೆ ಇಳಿಯಲಿದೆಯಲ್ಲದೆ ಈ ಯೋಜನೆಯನ್ನು ನಿಲ್ಲಿಸುವಂತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ರವರಿಗೆ ಮನವಿ ಮಾಡಲಿದ್ದೇವೆ" ಎಂದು ಸಂಘ ತಿಳಿಸಿದೆ. ಅಲ್ಲದೆ, ಈ ಯೋಜನೆಗೆ ತಡೆ ನೀಡುವಂತೆ ಸುಪ್ರಿಂಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ಕನ್ನಡ ಉಳಿಸಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
|