ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ 66ನೇ ಜನ್ಮದಿನವನ್ನು ಬುಧವಾರ ತಮ್ಮ ನಿವಾಸದಲ್ಲಿ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಯಡಿಯೂರಪ್ಪ ನಿವಾಸಕ್ಕೆ ತೆರಳಿ ಹಾರ ಹಾಕಿ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ನಡೆದಿರುವ ರಾಜ್ಯಪಾಲರ ದುರಾಡಳಿತದ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ದೂರು ನೀಡಲಿದ್ದೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ಹಿರಿಯ ಮುಖಂಡರಾದ ವೆಂಕಯ್ಯ ನಾಯ್ಡು ಸಿಹಿ ನೀಡುವ ಮೂಲಕ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ರಾಮಚಂದ್ರೇಗೌಡ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವಾರು ನಾಯಕರು ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಶುಭ ಹಾರೈಸಿದರು.
ಯಡಿಯೂರಪ್ಪ ಹೆಸರಿನಲ್ಲಿನ ವೆಬ್‌ಸೈಟೊಂದಕ್ಕೆ ಈ ವೇಳೆ ಚಾಲನೆ ನೀಡಲಾಯಿತು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಹುಟ್ಟುಹಬ್ಬದ ಪ್ರಯುಕ್ತ ಮಾಜಿ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಜನರಲ್ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
|