ಕೇಂದ್ರ ರೈಲ್ವೆ ಸಚಿವ ಲಾಲೂಪ್ರಸಾದ್ ಯಾದವ್ ಮಂಡಿಸಿರುವ ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಆದ್ಯತೆ ನೀಡಿಲ್ಲ, ಸತತವಾಗಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಖಂಡಿಸಿ, ಮಾರ್ಚ್ 23ರಂದು 24ಗಂಟೆಗಳ ಕಾಲ ರೈಲು ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ಮಾಜಿ ಶಾಸಕ ವಾಟಾಳ್ ನಾಗಾರಾಜ್ ನಿರ್ಧರಿಸಿದ್ದಾರೆ.
ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ರೈಲ್ವೆ, ಮಹಾಜನ್ ವರದಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಕಾವೇರಿ ವಿವಾದ ಸೇರಿದಂತೆ ಹತ್ತು ಹಲವು ವಿಚಾರದಲ್ಲಿ ಹೆಜ್ಜೆ ಹೆಜ್ಜೆಗೂ ಕನ್ನಡಿಗರನ್ನು ಅವಮಾನಿಸುತ್ತ ಬಂದಿದೆ ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ಕನ್ನಡಿಗರಿಗೆ ಅನ್ಯಾಯವಾಗಲು ರಾಜ್ಯದ ಸಂಸದರ ನಿಧಾನ ಪ್ರವೃತ್ತಿಯೇ ಕಾರಣ ಎಂದು ದೂರಿದ ಅವರು, ಸಂಬಂಧ ಉದ್ದೇಶಿಸಲಾಗಿರುವ ರೈಲು ಸತ್ಯಾಗ್ರಹದಲ್ಲಿ ರಾಜ್ಯದ ಜನತೆ ಸಹಕಾರ ನೀಡಿ ಆ ಮೂಲಕ ಕನ್ನಡಿಗರ ಶಕ್ತಿ ತೋರಿಸಬೇಕೆಂದು ಮನವಿ ಮಾಡಿದರು.
ಈ ಮಧ್ಯೆ ಹೊಗೆನೇಕಲ್ ಜಲಾಶಯಕ್ಕೆ ಸಂಬಂಧಿಸಿದಂತೆ ಸಾಲ ನೀಡಲು ಮುಂದಾಗಿರುವ ಜಪಾನ್ ಸಹಕಾರಿ ಬ್ಯಾಂಕ್ ಯಾವುದೇ ಕಾರಣಕ್ಕೂ ಸಾಲ ನೀಡಬಾರದು ಎಂದು ಅವರು ಹೇಳಿದರು.
|