ರಾಜ್ಯ ವಿಧಾನಸಭಾ ಚುನಾವಣೆಯನ್ನು ಮೇ ತಿಂಗಳಲ್ಲೇ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂಬ ಸುದ್ದಿಗಳು ರಾಜ್ಯ ರಾಜಕೀಯದಲ್ಲಿ ಸಂಚಲನೆ ಮೂಡಿಸಿದೆ.
ಈ ಹಿಂದೆ ರಾಷ್ಟ್ರಪತಿ ಆಡಳಿತ ಮೇ ತಿಂಗಳಲ್ಲಿ ಅಂತ್ಯಗೊಂಡರೂ, ಕ್ಷೇತ್ರ ಮರುವಿಂಗಡಣೆಯ ಹಿನ್ನೆಲೆಯಲ್ಲಿ ಶೀಘ್ರ ಚುನಾವಣೆಗಳು ನಡೆಯುವುದಿಲ್ಲ ಎಂಬ ಸುದ್ದಿ ಹಬ್ಬಿದ್ದಾಗ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ನವೆಂಬರ್‌ಗಿಂತ ಮುಂಚಿತವಾಗಿ ಚುನಾವಣೆ ನಡೆಯುವುದಿಲ್ಲ ಎಂಬ ಸುದ್ದಿ ದೆಹಲಿಯಿಂದ ರವಾನೆಯಾದಾಗ ಕೆಲ ರಾಜಕಾರಣಿಗಳು ರಿಲಾಕ್ಸ್ ಆಗಿದ್ದರೆ, ಇನ್ನು ಕೆಲವು ಕಾಳಜಿಯುಳ್ಳ ರಾಜಕರಣಿಗಳು ತಂತಮ್ಮ ಕ್ಷೇತ್ರಗಳೆಡೆ ತೆರಳಿದ್ದರು.
ಈಗ ಚುನಾವಣೆ ನಡೆದರೆ ಅನುಕಂಪದ ಆಧಾರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯೇರುತ್ತದೆ. ಆದ್ದರಿಂದ ನವೆಂಬರ್ನಲ್ಲಿಯೇ ಚುನಾವಣೆ ನಡೆಯುವುದು ಪಕ್ಷದ ಸಂಘಟನಾತ್ಮ ದೃಷ್ಟಿಯಿಂದ ಹಾಗೂ ಅಧಿಕಾರಕ್ಕೆ ಮರಳುವ ದೃಷ್ಟಿಯಿಂದ ಒಳ್ಳೆಯದು ಎಂದು ತಂತ್ರ ಹೂಡಿದ್ದ ಕಾಂಗ್ರೆಸ್‌ಗೆ ಚುನಾವಣಾ ಆಯೋಗದ ನಿರ್ಧಾರ ಅಸಮಾಧಾನ ತಂದಿಟ್ಟಿದೆ.
ಕ್ಷೇತ್ರ ಪುನರ್ವಿಂಗಡಣೆಯ ಗುಮ್ಮನನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದಕ್ಕೆ ಹಾಕಿಸುವ ಇರಾದೆಯಲ್ಲಿದ್ದ ರಾಜ್ಯ ಕಾಂಗ್ರೆಸ್ ಇದು ಅಸಮಾಧಾನದ ಪರ್ವಕಾಲ. ಏಕೆಂದರೆ, ಚುನಾವಣೆ ಬಂತೆಂದರೆ ಕೆಪಿಸಿಸಿಯಲ್ಲಿನ ಕೆಲ ಹಿರಿತಲೆಗಳು ಉರುಳುತ್ತವೆ. ಆಗ ಸಹಜವಾಗಿಯೇ ಭಿನ್ನಮತ ಎದುರಾಗುತ್ತದೆ. ಭಿನ್ನಮತವನ್ನು ಸರಿಪಡಿಸಿಕೊಳ್ಳೋಣವೆಂದರೆ ಅದಕ್ಕೆ ಸಾಕಷ್ಟು ಸಮಯವಿರದೆ ಚುನಾವಣೆ ಎದುರಾಗುತ್ತದೆ. ಇದಕ್ಕೆ ತುಪ್ಪ ಸುರಿಯುವಂತೆ ರಾಜ್ಯ ರಾಜಕಾರಣಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಮರಳುವ ವಿಷಯ ಕೆಲ ಕಾಂಗ್ರೆಸ್ಸಿಗರಿಗೆ ಪಥ್ಯವಾಗಿಲ್ಲ. ಈ ಎಲ್ಲಾ ಅಂಶಗಳು ಅಧಿಕಾರ ಸೂತ್ರ ಹಿಡಿಯಲು ಬಯಸಿರುವ ಕಾಂಗ್ರೆಸ್ಸಿಗರಿಗೆ ಬಿಸಿತುಪ್ಪವಾಗಿ ಮಾರ್ಪಟ್ಟಿದೆ.
ಮೇ ತಿಂಗಳಲ್ಲಿ ಚುನಾವಣೆ ನಡೆಯಬಹುದೆಂದ ಸುದ್ದಿಯಿಂದ ರಾಜ್ಯ ಬಿಜೆಪಿ ಉಲ್ಲಾಸಗೊಂಡಿದೆ. ಅನುಕಂಪದ ಆಧಾರದಲ್ಲಿ ಮತಗಿಟ್ಟಿಸಿಕೊಳ್ಳಬಹುದೆಂಬುದು ಒಂದು ಸಮಾಧಾನದ ಅಂಶವಾದರೆ, ವಿವಿಧ ಪಕ್ಷಗಳ ಮುಖಂಡರು ಬಿಜೆಪಿಯತ್ತ ಮುಖ ಮಾಡಿರುವುದು ಮತ್ತೊಂದು ಕಾರಣ.
ಒಟ್ಟಿನಲ್ಲಿ ಚುನಾವಣೆಯ ಸುದ್ದಿ ಹಲವರಲ್ಲಿ ಪುಳಕವನ್ನುಂಟುಮಾಡಿದ್ದರೆ, ಹಲವರಿಗೆ ನಡುಕ ತಂದಿದೆ.
|