ಯಾವುದೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಭರದಿಂದ ನಡೆಯುತ್ತಿದ್ದು, ಇದೀಗ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಇಬ್ರಾಹಿಂ ಅವರ ಪಕ್ಷಾಂತರಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. ಇಬ್ರಾಹಿಂ ಅವರು ಬಿಜೆಪಿಗೂ, ಬಂಗಾರಪ್ಪ ಮರಳಿ ಮಾತೃಪಕ್ಷ ಕಾಂಗ್ರೆಸ್‌ಗೆ ಸೇರಲಿದ್ದಾರೆಂಬ ವದಂತಿಗಳಿಗೆ ಮತ್ತೆ ಚಾಲನೆ ದೊರೆತಿದೆ.
ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂರನ್ನು ಬಿಜೆಪಿಗೆ ಸೆಳೆಯುವ ಕುರಿತು ಈ ಹಿಂದೆ ಮಾತುಕತೆಗಳು ನಡೆಯುತ್ತಿದ್ದವು. ಬಿಜೆಪಿಗೆ ಜಿ.ಟಿ.ದೇವೇಗೌಡರೇ ಮೊದಲಾಗಿ ಬೇರೆ ಪಕ್ಷಗಳ ನಾಯಕರು ಸೇರ್ಪಡೆಗೊಂಡ ಸಮಯದಲ್ಲೇ ಇಬ್ರಾಹಿಂರವರನ್ನೂ ಬಿಜೆಪಿಗೆ ಸೇರಿಸಿಕೊಳ್ಳಲಾಗುವುದು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.
ಆದರೆ ವಿಧಾನಸಭಾ ಚುನಾವಣೆಗಳು ನವೆಂಬರ್ ತನಕ ನಡೆಯುವುದಿಲ್ಲ ಎಂಬ ಸುದ್ದಿ ಹೊರಬಿದ್ದಾಗ ಈ ಸುದ್ದಿಯ ಪ್ರಾಮುಖ್ಯತೆಯೂ ಮೂಲೆಗೆ ಸರಿಯಿತು. ಇದೀಗ ಮತ್ತೆ ಮೇ ತಿಂಗಳಲ್ಲಿಯೇ ಚುನಾವಣೆಗಳು ನಡೆಯುವುದರ ಕುರಿತು ಸೂಚನೆಗಳು ದೊರಕಿರುವುದರಿಂದ ಬಿಜೆಪಿ ಮೈಕೊಡವಿಕೊಂಡು ಎದ್ದುನಿಂತಿದೆ. ಈಗ ಬಿಟ್ಟರೆ ಮತ್ತೆ ಇನ್ನೆಂದೂ ಇಲ್ಲ ಎಂಬ ಮನೋಭಾವವನ್ನು ತಾಳಿರುವ ಈ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಬಲ್ಲ ಸಿ.ಎಂ.ಇಬ್ರಾಹಿಂರಿಗೆ ಗಾಳ ಹಾಕಲಿದೆ ಎಂದು ಮೂಲಗಳು ಹೇಳುತ್ತಿವೆ.
ಇದೇ ರೀತಿಯ ಮತ್ತೊಂದು ರಂಗು ರಂಗಿನ ಸುದ್ದಿ ಸಮಾಜವಾದಿ ಪಕ್ಷದ ನಾಯಕ ಎಸ್.ಬಂಗಾರಪ್ಪನವರದು. ಸುದ್ದಿವಾಹಿನಿಯೊಂದರಲ್ಲಿ ಮಾತಾಡುತ್ತಿದ್ದ ಮಾಜಿ ಸಚಿವ ವಿಶ್ವನಾಥ್ ಅವರು ಕೆಲದಿನಗಳ ಹಿಂದೆ ಬಂಗಾರಪ್ಪ ಸದ್ಯದಲ್ಲಿಯೇ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂದಿದ್ದರು. ಆದರೆ, ಎರಡು ದಿನದ ಬಳಿಕ ಈ ಸುದ್ದಿಯನ್ನು ಬಂಗಾರಪ್ಪ ತಳ್ಳಿಹಾಕಿದ್ದು "ವಿಶ್ವನಾಥ್‌ಗೆ ತಲೆ ಕೆಟ್ಟಿದೆ" ಎಂದು ಪ್ರತಿಕ್ರಿಯಿಸಿದ್ದರು. ಆದರೆ ಚುನಾವಣೆ ಮುಂದೂಡಿಕೆಯಲ್ಲಿ ಕಾಂಗ್ರೆಸ್ ಪಾತ್ರವಿದೆ ಎಂದು ಇತರ ಪಕ್ಷಗಳು ಬೊಬ್ಬೆ ಹೊಡೆಯುತ್ತಿರುವಾಗ ಬಂಗಾರಪ್ಪ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿರಲಿಲ್ಲ. ಇದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಲಾಗಿತ್ತು.
ಈಗ ಮತ್ತೆ ಆ ಸುದ್ದಿಗೆ ಚಾಲನೆ ಸಿಕ್ಕಿದೆ. ಕಾಂಗ್ರೆಸ್ ವಲಯದಿಂದ ಬಂಗಾರಪ್ಪನವರ ಸೇರ್ಪಡೆಗೆ ಉತ್ಸಾಹ ವ್ಯಕ್ತವಾಗಿದ್ದು, ಅವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತೆ ಹಿಂದಿನ ಚರಿಷ್ಮಾ ಬರುತ್ತದೆ ಎಂದು ಬಿಂಬಿಸಲಾಗುತ್ತಿದೆ. ಒಟ್ಟಿನಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿಯವರು ಬರುವ ಹೊತ್ತಿಗೆ ಅವರ ಪಕ್ಷಸೇರ್ಪಡೆಗೆ ಸೂಕ್ತ ವೇದಿಕೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಕೆಲ ರಾಜಕೀಯ ಮೂಲಗಳು ತಿಳಿಸಿವೆ.
|