ರಾಜಕೀಯ ಇಚ್ಛಾಶಕ್ತಿಯ ನೆರವಿಲ್ಲದೆ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಹತ್ತಿಕ್ಕುವುದು ಅಸಾಧ್ಯ ಎಂದು ಬಂಡಾಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಕರ್ನಾಟಕ ಸಿಂಹಸೇನೆ ಆಯೋಜಿಸಿರುವ ದಿಲ್ಲಿ ಚಲೋ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಧರಿಸಲು ಹಮ್ಮಿಕೊಳ್ಳಲಾಗಿದ್ದ ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಪಕ್ಕದ ತಮಿಳುನಾಡಿನಲ್ಲಿ ಭಾಷೆಯ ವಿಚಾರ ಬಂದಾಗ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಕರ್ನಾಟಕದಲ್ಲಿ ಇದನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆಗೆ ರಾಜಕೀಯ ವಲಯದ ಬೆಂಬಲ ಸಿಗುವವರೆಗೂ ಕನ್ನಡಿಗರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಚಂಪಾ ತಿಳಿಸಿದರು.
ಕರ್ನಾಟಕದಲ್ಲಿ ಕನ್ನಡದ ಕುರಿತಾಗಿ ಬದ್ಧತೆ ಪ್ರದರ್ಶಿಸುತ್ತಿರುವ ಎಷ್ಟೋ ಸಂಘಟನೆಗಳಿವೆ. ಅವುಗಳನ್ನು ಒಂದೇ ವೇದಿಕೆಗೆ ತರುವುದು ಕಷ್ಟಕರ ಕೆಲಸ. ಆದ್ದರಿಂದ ಕನ್ನಡ ಪರ ಸಂಘಟನೆಗಳು ತಂತಮ್ಮ ಇತಿಮಿತಿಯಲ್ಲಿಯೇ ಹೋರಾಟ ನಡೆಸಬೇಕಾಗುತ್ತದೆ ಎಂದು ಚಂಪಾ ಈ ಸಂದರ್ಭದಲ್ಲಿ ತಿಳಿಸಿದರು.
|