ರಾಜ್ಯದಲ್ಲಿ ಉಗ್ರರ ನಾಯಕರು ಬುಡಮೇಲು ಕೃತ್ಯಗಳನ್ನು ನಡೆಸಲು ಯೋಜಿಸುರುವಂತೆಯೇ, ಹೊರರಾಜ್ಯದಲ್ಲಿಯೂ ಉಗ್ರರ ನಾಯಕರು ನೆಲೆಸಿದ್ದಾರೆಂಬ ಅಂಶ ತನಿಖೆಯಿಂದ ಬಹಿರಂಗಗೊಂಡಿದೆ. ಈ ಕುರಿತು ಬಂಧಿತ ಉಗ್ರರಿಂದ ಸಾಕಷ್ಟು ಮಾಹಿತಿಯನ್ನು ಸಿಓಡಿ ಪೊಲೀಸರು ಕಲೆ ಹಾಕುತ್ತಿದ್ದಾರೆ.
ದಾವಣಗೆರೆಯಲ್ಲಿ ಸೆರೆ ಸಿಕ್ಕ ಮಹಮದ್ ಗೌಸ್ ಹಾಗೂ ಅಸಾದುಲ್ಲಾರಿಂದ ಪ್ರಾರಂಭಗೊಂಡ ತನಿಖೆಯ ಅಧಾರದಲ್ಲಿ ಮಹಮದ್ ಆಸಿಫ್, ಶಕೀಲ್, ಸಮೀರ್ ಹಾಗೂ ಯಾಹ್ಯಾಖಾನ್ ಮೊದಲಾದ ಪ್ರಮುಖರನ್ನು ಬಂಧಿಸುವಲ್ಲಿ ಸಿಓಡಿ ಯಶಸ್ವಿಯಾಗಿದೆ. ಆದರೆ ಇವರ ನಾಯಕರು ಹೊರರಾಜ್ಯದಲ್ಲಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಸಂಬಂಧ ಹೊರರಾಜ್ಯದ ಪೊಲೀಸರೊಂದಿಗೆ ನೇರ ಸಂಪರ್ಕ ಹೊಂದಿರುವ ಸಿಓಡಿ, ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದು, ತನಿಖೆಗೆ ಅಡ್ಡಿಯಾಗಬಹುದೆಂಬ ದೃಷ್ಟಿಯಿಂದ ಬಹುತೇಕ ವಿಷಯಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿಲ್ಲ ಎನ್ನಲಾಗಿದೆ.
ಬಂಧಿತ ಉಗ್ರರಲ್ಲಿ ಬಹುತೇಕರು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಉಗ್ರರು ಭಯೋತ್ಪಾದಕ ಚಟುವಟಿಕೆಗೆ ಇಂತಹ ಬುದ್ದಿವಂತ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ಆಘಾತಕಾರಿ ಅಂಶವಾಗಿದೆ. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಗೈರು ಹಾಜರಾಗುವ ವಿದ್ಯಾರ್ಥಿಗಳ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಯುವಕರು ದಾರಿ ತಪ್ಪಬಾರದೆಂಬ ದೃಷ್ಟಿಯಿಂದ ಇಂತಹ ಯುವಕರ ಮೇಲೆ ನಿಗಾ ವಹಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಸಿಓಡಿ ಪೊಲೀಸರು ತಿಳಿಸಿದ್ದಾರೆ.
|