ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತವಿರುವುದರಿಂದ 2008-09ರ ರಾಜ್ಯ ಬಜೆಟ್ ಸಂಸತ್ತಿನಲ್ಲಿ ಮಾರ್ಚ್ 7ರಂದು ಮಂಡನೆಯಾಗಲಿದ್ದು, ಚಿದಂಬರಂ ಚಮತ್ಕಾರಕ್ಕಾಗಿ ರಾಜ್ಯ ಕುತೂಹಲದಿಂದ ಕಾಯುತ್ತಿದೆ.
ಈ ಮೊದಲೇ ರೈಲ್ವೆ ನೇಮಕಾತಿ, ಕನ್ನಡಿಗರ ಸ್ಥಾನಮಾನ ಹಾಗೂ ಇತ್ತೀಚೆಗೆ ನಡೆದ ರೈಲ್ವೆ ಬಜೆಟ್ನಲ್ಲಿ ಕರ್ನಾಟಕ್ಕೆ ಆದ್ಯತೆ ನೀಡಿಲ್ಲ ಎಂಬುದು ಕನ್ನಡಿಗರ ಆರೋಪವಾಗಿದ್ದು, ಹೆಜ್ಜೆ ಹೆಜ್ಜೆಗೂ ಕರ್ನಾಟಕವನ್ನು ಕಡೆಗೆಣೆಸಲಾಗುತ್ತಿದೆ ಎಂದು ರಾಜ್ಯದ ಜನತೆ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದ ಈ ರೀತಿಯ ಧೋರಣೆಗಳು ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ಈ ಎಲ್ಲಾ ಬೆಳವಣಿಗೆಯಿಂದ ಕೇಂದ್ರ ಸರ್ಕಾರದ ಮಟ್ಟಿಗೆ ಕರ್ನಾಟಕ ಒಂದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಇವೆಲ್ಲವುದರ ನಡುವೆ ವಿಧಾನಸಭಾ ಚುನಾವಣೆಯೂ ಸಮೀಪಿಸುತ್ತಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಏನಾದರೂ ಮ್ಯಾಜಿಕ್ ಮಾಡಬೇಕಾದ್ದು ಅನಿವಾರ್ಯ.
ಇದಕ್ಕೆ ಪೂರಕವೆಂಬಂತೆ ರಾಜ್ಯ ಬಜೆಟ್ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಬಹುಶಃ ಇದೊಂದು ಕಾಂಗ್ರೆಸ್‌ಗೆ ಸೂಕ್ತ ಸಮಯವೇಂದೇ ಹೇಳಬಹುದು. ಇದುವರೆಗೆ ರಾಜ್ಯದ ಬಗ್ಗೆ ಬಹುತೇಕ ವಿಷಯಗಳಲ್ಲಿ ಅಸಡ್ಡೆ ತೋರಿರುವ ಕೇಂದ್ರ ಸರ್ಕಾರ, ಬಜೆಟ್ ಮೂಲಕ ರಾಜ್ಯದ ಜನತೆಯನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದರೂ ಆಶ್ಚರ್ಯವಿಲ್ಲ. ಅದೇನೇ ಇರಲಿ, ರಾಜ್ಯಕ್ಕೆ ಉತ್ತಮ ಬಜೆಟ್ ಚಿದಂಬರಂ ನೀಡಬಹುದೆಂಬುದು ಜನರ ಆಕಾಂಕ್ಷೆ.
|