ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಶುಕ್ರವಾರ ಸಂಸತ್‌ನಲ್ಲಿ ಮಂಡಿಸಿರುವ ಬಜೆಟ್ ರೈತರು ಹಾಗೂ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ ಎಂದು ಬಹುತೇಕ ಪಕ್ಷಗಳು ಸ್ವಾಗತಿಸಿದರೆ, ಇದೊಂದು ಚುನಾವಣಾ ತಂತ್ರ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಈ ಬಗ್ಗೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಲಾಗಿರುವ ಯೋಜನೆಗಳ ನಕಲು ಮಾದರಿಯಾಗಿದೆ. ಆ ಸಂದರ್ಭದಲ್ಲಿ ತನ್ನ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ಬಜೆಟನ್ನು ಸ್ವಾಗತಿಸುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಭಾರತ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಉತ್ತಮ ಬಜೆಟ್ ಮಂಡಿಸಲಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅತಿ ಸಣ್ಣ ಹಾಗೂ ಸಣ್ಣ ರೈತರ ಸಾಲ ಮನ್ನಾದಿಂದ ರೈತರಿಗೆ ಹೊಸ ಚೈತನ್ಯ ಮೂಡಿದೆ. ಈ ಮಧ್ಯೆ ಮಹಿಳೆಯರಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದು, ಒಟ್ಟಾರೆಯಾಗಿ ಬಜೆಟ್ ಜನಪರವಾಗಿದೆ ಎಂದು ಪ್ರಶಂಸಿದರು.
ತಮ್ಮದೇ ವರಸೆಯಲ್ಲಿ ಬಜೆಟ್ ಮಂಡನೆಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಜೆಟಲ್ಲಿ ಘೋಷಿಸಲಾಗಿರುವ ಜನಪರ ಕಾರ್ಯಕ್ರಮಗಳನ್ನು ಪರೀಶೀಲಿಸಿದರೆ ಶೀಘ್ರದಲ್ಲಿ ಸಂಸತ್ ಚುನಾವಣೆ ಬರಲಿದೆ ಎಂಬ ಸೂಚನೆ ಕಾಣುತ್ತಿದೆ. ಆದರೆ, ಈ ಬಜೆಟ್ ಮುಖ್ಯವಾಗಿ ರೈತರ ಪಾಲಿಗೆ ನೆಮ್ಮದಿ ತರಲಿದೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನುದಾನವನ್ನು ದ್ವಿಗುಣಗೊಳಿಸುವ ಮೂಲಕ ಬಜೆಟ್‌ಗೆ ಕೋಮುವಾದದ ಬಣ್ಣ ಕೊಡಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಕಡೆಗೆಣಿಸಲಾಗಿದೆ ಎಂದು ಬಿಜೆಪಿ ಸಂಸದ ಅನಂತ್‌ಕುಮಾರ್ ಖಂಡಿಸಿದ್ದಾರೆ.
|