ರಾಜ್ಯದಲ್ಲಿ ಬಂಧನಕ್ಕೀಡಾಗಿರುವ ಉಗ್ರರ ವಿಚಾರಣೆಯಲ್ಲಿ ರಾಜಕೀಯ ವ್ಯಕ್ತಿಗಳು ಹಸ್ತಕ್ಷೇಪ ಮಾಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಕೊಪ್ಪಳದಲ್ಲಿ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಉಗ್ರರ ತನಿಖೆಯನ್ನು ತೀವ್ರಗೊಳಿಸಿರುವ ಸಿಓಡಿ ಪೊಲೀಸರ ಕಾರ್ಯವನ್ನು ಮೆಚ್ಚಬೇಕು. ಅದು ಬಿಟ್ಟು, ಉಗ್ರರ ಪರವಾಗಿ ವಾದಿಸುವುದು ಸರಿಯಲ್ಲ. ಅನೇಕ ರಾಜಕೀಯ ನಾಯಕರು ಉಗ್ರರ ಬಗ್ಗೆ ಮೃದು ಧೋರಣೆ ತಾಳುವುದು ತಪ್ಪು" ಎಂದು ನುಡಿದರು.
ಈ ನಡುವೆ ರಾಷ್ಟ್ರಪತಿ ಆಡಳಿತದ ಕುರಿತು ಮಾತನಾಡಿದ ಯಡಿಯೂರಪ್ಪ, ರಾಜ್ಯಪಾಲರು ಹಾಗೂ ರಾಜ್ಯ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯಪಾಲರು ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ಕಾರ್ಯಕ್ರಮ ನಡೆಸಲಿದೆ ಎಂದು ತಿಳಿಸಿದರು.
ಹೆಚ್ಚಿನ ಮತದಾರರು ಬಿಜೆಪಿ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದು, ಈ ಸಕಾರಾತ್ಮಕ ಬೆಳವಣಿಗೆಯಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದೆ ಎಂದು ಅವರು ಪುನರುಚ್ಚರಿಸಿದರು.
|