ಮೀಟಾ ಸಂಘಟನೆಯು ಯಾವುದೇ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿಲ್ಲ ಎಂದು ಮೀಟಾ ಸಂಘಟನೆ ಸ್ಪಷ್ಟೀಕರಣ ನೀಡಿದೆ.
ಮೀಟಾ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ ಎಂಬ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಅನುಮಾನವನ್ನು ದೂರಮಾಡುವುದಕ್ಕಾಗಿ ಇಂದು ಮೀಟಾ ಸಂಘಟನೆ ಪತ್ರಿಕಾಗೋಷ್ಠಿಯನ್ನು ಕರೆದಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀಟಾ ಸಂಘಟನೆಯ ಅಧ್ಯಕ್ಷ ಕೆ.ಎಂ. ಶರೀಫ್, ಬಡವರ ಏಳಿಗಾಗಿ ಶ್ರಮಿಸುತ್ತಿರುವ ಸಂಘಟನೆ ಇದಾಗಿದ್ದು, ತಮಗೆ ಯಾವ ಭಯೋತ್ಪಾದಕ ಸಂಘಟನೆಗಳೊಂದಿಗೂ ಸಂಬಂಧ ಇಲ್ಲ. ಈ ಬಗ್ಗೆ ಬಂಧಿತ ಉಗ್ರ ಯಾಹ್ಯಾ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಮೀಟಾ ಒಂದು ಮಾಹಿತಿ ತಂತ್ರಜ್ಞರ ಒಕ್ಕೂಟ ಅಷ್ಟೇ ಎಂದು ತಿಳಿಸಿದರು.
ಮೀಟಾ ಸಂಘಟನೆ 2000ದಲ್ಲಿ ಆರಂಭಗೊಂಡಿದ್ದರೂ, 2004ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಉಗ್ರರ ಹಾವಳಿಯಿಂದಾಗಿ ಪೊಲೀಸರು ಅನುಮಾನಗೊಂಡು ಅನೇಕ ಬಾರಿ ಮೀಟಾ ಸಂಘಟನೆಯ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಘಟನೆಯ ಬಗ್ಗೆ ಸಾರ್ವಜನಿಕರಿಗಿರುವ ಶಂಕೆ ತೊಡೆದು ಹಾಕುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
|