ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವೆ ಶ್ಲಾಘನೀಯ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುರಿತು ಪ್ರೊ| ಮಾಲ್ಕಮ್ ಹಾರ್ಪರ್ ಬರೆದಿರುವ ಡೆವಲಪ್ಮೆಂಟ್, ಡಿವಿನಿಟಿ ಮತ್ತು ಧರ್ಮ ಕೃತಿಯನ್ನು ರಾಜಭವನದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಸಣ್ಣ ಹಾಗೂ ಮಧ್ಯಮ ವರ್ಗದ ಜನರು, ಹಾಗೂ ಬಡವರ ಅಭಿವೃದ್ದಿಗೆ ಶ್ರೀ ಕ್ಷೇತ್ರ ಯೋಜನೆಯು ಬಹಳ ಹಿಂದಿನಿಂದಲೇ ವಿಶಿಷ್ಟ ಯೋಜನೆಗಳನ್ನು ಹಮ್ಮಿಕೊಂಡು ಬಂದಿದ್ದು, ಇದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವಿರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯ ಕುರಿತು ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
25 ವಸಂತಗಳನ್ನು ಪೂರೈಸಿರುವುದೇ ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದ ಅವರು, ಹಾರ್ಪರ್ ತಮ್ಮ ಕೃತಿಯಲ್ಲಿ ಯೋಜನೆಯ ಶಕ್ತಿ, ದೌರ್ಬಲ್ಯ ಎಲ್ಲವನ್ನೂ ಸಮಗ್ರವಾಗಿ ಪರೀಶೀಲಿಸಿ ಉತ್ತಮ ಸಲಹೆಯನ್ನು ನೀಡಿದ್ದಾರೆ. ಅವರು ನೀಡಿರುವ ಸಲಹೆಗಳನ್ನು ಮುಂದೆ ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಹೇಮಾವತಿ ವಿ. ಹೆಗ್ಗಡೆ, ಲೇಖಕ ಮಾಲ್ಕಮ್ ಹಾರ್ಪರ್, ಸಂಸ್ಥೆಯ ಕಾರ್ಯ ನಿರ್ವಾಹಕ ಡಾ| ಎಲ್.ಎಚ್. ಮಂಜುನಾಥ್, ಡಿ. ಸುರೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿರಿದ್ದರು.
|