ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯೊಬ್ಬ ಕನ್ನಡಿಗರ, ಕನ್ನಡದ ಬಗ್ಗೆ ಬರೆದಿರುವ ಅವಹೇಳನಕಾರಿಯಾಗಿ ಬರೆದಿರುವ ಕವನದ ವಿರುದ್ಧ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಮಂಗಳವಾರ ಕಂಪೆನಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ನಗರದಲ್ಲಿನ ಸಾಸ್ಕಿನ್ ಕಂಪೆನಿಯ ಉದ್ಯೋಗಿಯಾಗಿರುವ ಕೆನಡಾ ಮೂಲದ ಲೀ ಬರೆದಿರುವ ಹಾಡಿನಲ್ಲಿ ಕನ್ನಡಿಗರ ಬಗ್ಗೆ ಅವಮಾನವಾಗುವಂತಹ ಸಾಲುಗಳನ್ನು ಬರೆದಿರುವುದು ಕರವೇ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಸ್ಕಿನ್ ಕಂಪೆನಿಗೆ ನುಗ್ಗಿದ ಕಾರ್ಯಕರ್ತರು ಕಂಪ್ಯೂಟರ್ ಹಾಗೂ ಅನೇಕ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇದರಲ್ಲಿ ಸುಮಾರು 50 ಕಂಪ್ಯೂಟರ್ಗಳು ಧ್ವಂಸಗೊಂಡಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ಅಧ್ಯಕ್ಷ ಟಿ. ನಾರಾಯಣ ಗೌಡ, "ಹಾಡು ಬರೆದಿರುವಾತನನ್ನು ಕೂಡಲೇ ಬಂಧಿಸಬೇಕು. ಕರ್ನಾಟಕದಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದು ಕನ್ನಡಿಗರ ವಿರುದ್ಧವೇ ಬರೆದಿರುವ ಇಂತಹವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇನ್ನು ಮುಂದೆ ಕನ್ನಡ ಭಾಷೆಯನ್ನು ಅವಮಾನಿಸಿದ ಯಾವುದೇ ಸಾಫ್ಟ್‌ವೇರ್ ಕಂಪೆನಿಯು ರಾಜ್ಯದಲ್ಲಿ ಇರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ" ಎಂದು ಹೇಳಿದರು.
ಈ ಮಧ್ಯೆ ಸಾಸ್ಕಿನ್ ಕಂಪೆನಿ ಕನ್ನಡಕ್ಕೆ ಅವಮಾನ ಮಾಡಿರುವ ಬಗ್ಗೆ ಬೆಳಗಾವಿಯಲ್ಲೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದ್ದಾರೆ.
|