ಕೇಂದ್ರ ಚುನಾವಣಾ ಆಯೋಗವು ಮಂಗಳವಾರ ರಾಜಭವನದಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿದ್ದು, ರಾಜ್ಯದಲ್ಲಿ ಚುನಾವಣೆ ನಡೆಸುವ ಕುರಿತ ಪೂರ್ವಭಾವಿ ಸಭೆ ಇದಾಗಿದೆ. ರಾಜ್ಯದಲ್ಲಿ ಈ ಬೇಸಿಗೆಯಲ್ಲೇ ಚುನಾವಣೆಗಳನ್ನು ಪೂರ್ಣಗೊಳಿಸುವ ಬಗ್ಗೆ ಆಯೋಗ ಗಂಭೀರ ಚಿಂತನೆಯಲ್ಲಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಹಾಗೂ ಆಯುಕ್ತರಾದ ನವೀನ್ ಚಾವ್ಲಾ ಹಾಗೂ ಡಾ. ಎಸ್. ಖುರೇಷಿ ವಿಧಾನಸೌಧದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚಿಸಿ, ಬಳಿಕ ರಾಜಕೀಯ ಪಕ್ಷಗಳ ಹಿರಿಯ ನಾಯಕರೊಂದಿಗೆ ಚುನಾವಣೆ ಕುರಿತು ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಶೀಘ್ರ ಚುನಾವಣೆ ನಡೆಸುವಂತೆ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಮೇ ಅಂತ್ಯಕ್ಕೆ ಮುಗಿಯಲಿದ್ದು, ಆ ಕೂಡಲೇ ಚುನಾವಣೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಆದರೆ ಮತದಾರರ ಪಟ್ಟಿಯಲ್ಲಿ ಲೋಪದೋಷಗಳನ್ನು ಸರಿಪಡಿಸದ ಬಳಿಕವೇ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಒಟ್ಟಾರೆಯಾಗಿ ರಾಜ್ಯದ ಚುನಾವಣಾ ಭವಿಷ್ಯ ಇಂದು ಸಂಜೆಯ ವೇಳೆಗೆ ಹೊರಬೀಳುವುದು ಬಹುತೇಕ ನಿಶ್ಚಿತವಾಗಿದೆ.
|