ರಾಜ್ಯ ಪ್ರವಾಸದಲ್ಲಿರುವ ಚುನಾವಣಾ ಆಯೋಗವು ಮಾರ್ಚ್ 8ಕ್ಕೆ ಮತದಾರರ ಅಂತಿಮ ಪಟ್ಟಿ ಬಿಡುಗಡೆಯಾಗಬೇಕೆಂದು ರಾಜ್ಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಚುನಾವಣಾ ಅಧಿಕಾರಿಗಳು ಮಂಗಳವಾರ ರಾಜಭವನದಲ್ಲಿ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದ್ದು ಈ ಮೂಲಕ ಮೇ ಅಂತ್ಯದಲ್ಲಿ ಚುನಾವಣೆ ನಡೆಸುವ ಬಗ್ಗೆ ಸುಳಿವು ಲಭಿಸಿದೆ.
ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ತೀವ್ರ ಕಸರತ್ತು ಪ್ರಾರಂಭಗೊಂಡಿದೆ. ಆದರೆ, ಇದುವರೆಗೆ ಚುನಾವಣೆ ಕುರಿತು ತಲೆ ಕೆಡಿಸಿಕೊಂಡಿರದ ಕಾಂಗ್ರೆಸ್ ಪಾಳಯದಲ್ಲಿ ಈಗ ಸಂಚಲನ ಮೂಡಿದ್ದು, ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚೌಹಾಣ್ ಇಂದು ಕೂಡ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ಮುಂದುವರೆಸಿದ್ದಾರೆ.
ಸಭೆಯಲ್ಲಿ ಕೆಪಿಸಿಸಿ ಪುನಾರಚನೆ, ಸಂಘಟನೆಯ ಬಲವರ್ಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಚುನಾವಣಾ ಮುಂದೂಡುವ ಪ್ರಯತ್ನದ ಬಗ್ಗೆಯೂ ಚರ್ಚೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಚೌಹಾಣ್ ರಾಜಭವನಕ್ಕೆ ತೆರಳಿದ್ದು, ರಾಜ್ಯಪಾಲ ರಾಮೇಶ್ವರ್ ಠಾಕೂರ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸದ ಬಳಿಕವೇ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಆಯೋಗವನ್ನು ಭೇಟಿಮಾಡಿ ಮನವಿ ಸಲ್ಲಿಸಲಿದೆ.
|