ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯೋರ್ವ ಕನ್ನಡವನ್ನು ಅವಮಾನಿಸಿ ಕವನ ರಚಿಸಿ ಅದನ್ನು ಇ-ಮೇಲ್ ಮೂಲಕ ವಿತರಿಸುತ್ತಿರುವ ವಿಚಾರವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿರುವ ಪ್ರತಿಭಟನೆ ಇಂದು ಕೂಡ ಮುಂದುವರಿದಿದ್ದು, ವೈಟ್ ಫೀಲ್ಡ್ ಬಳಿ ಕಾಲ್ ಸೆಂಟರ್ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗಿದೆ.
ಖಾಸಗಿ ಕಂಪೆನಿಗಳಲ್ಲಿ ಕನ್ನಡಕ್ಕೆ ಹಾಗೂ ಕರ್ನಾಟಕದ ಜನತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಟಿ. ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ, ಯಾವುದೇ ಪ್ರಯೋಜನವಾಗಲಿಲ್ಲ.
ಖಾಸಗಿ ಕಂಪೆನಿಯೊಂದರ ಉದ್ಯೌಗಿಯೊಬ್ಬ ಕನ್ನಡಿಗರನ್ನು ಅವಮಾನವಾಗುವಂತಹ ಕವನವನ್ನು ಬರೆದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕಾಲ್ ಸೆಂಟರ್ ವಾಹನಗಳನ್ನು ತಡೆದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಕರವೇ ಕಾರ್ಯಕರ್ತರ ಪ್ರತಿಭಟನೆಯಿಂದ ಸ್ಥಳದಲ್ಲಿ ಪರಿಸ್ಥಿತಿ ತೀವ್ರ ಸ್ವರೂಪ ಪಡೆದಿದ್ದು, ವೈಟ್‌ಫೀಲ್ಡ್, ಮಾರತ್ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಬಂದ್ ಆಗಿದೆ.
|