ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲಿರುವ ಕೃಷ್ಣ
ನಿರೀಕ್ಷಿತ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಪ್ರಕಟಿಸಿದ್ದು, ಬುಧವಾರ ಸಂಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆ ಬಹುತೇಕ ಮೇ ತಿಂಗಳಲ್ಲೇ ನಡೆಯಲಿರುವುದರಿಂದ ಅವರೀಗ ಕರ್ನಾಟಕ ರಾಜಕೀಯಕ್ಕೆ ಮತ್ತೆ ಮರಳುವ ಉತ್ಸುಕತೆಯಲ್ಲಿದ್ದಾರೆ.

ಪಕ್ಷದ ಹೈಕಮಾಂಡ್‌ನಿಂದ ಈಗಾಗಲೇ ರಾಜಕೀಯಕ್ಕೆ ಮರಳಲು ಕೃಷ್ಣರಿಗೆ ಹಸಿರು ನಿಶಾನೆ ದೊರೆತಿದೆ. ಬೆಂಗಳೂರಿನಲ್ಲಿರುವ ಕೃಷ್ಣ ಅವರಿಗೆ ಮಂಗಳವಾರ ರಾತ್ರಿ ಹೈಕಮಾಂಡ್‌ನಿಂದ ಬುಲಾವ್ ಬಂದಿದ್ದು, ಅವರು ದೆಹಲಿಗೆ ತೆರಳಿದ್ದರು. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವಂತೆ ಕೃಷ್ಣರಿಗೆ ಸೋನಿಯಾ ಗಾಂಧಿ ಸೂಚಿಸಿದ್ದು, ಅದರಂತೆ ಇಂದು ಸಂಜೆ 6.45ರ ವೇಳೆಗೆ ಅವರು ರಾಷ್ಟ್ರಪತಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋನಿಯಾ ಮತ್ತು ಕೃಷ್ಣ ನಡುವೆ ಎರಡು ಗಂಟೆ ಕಾಲ ಮಾತುಕತೆ ನಡೆದಿದ್ದು, ರಾಜ್ಯದ ವಿದ್ಯಮಾನಗಳ ಕುರಿತು ಚರ್ಚಿಸಲಾಗಿತ್ತು. ಆ ಬಳಿಕ ಕೃಷ್ಣ ಅಭಿಲಾಷೆಗೆ ಸೋನಿಯಾ ಹಸಿರು ನಿಶಾನೆ ತೋರಿದರೆಂದು ತಿಳಿದುಬಂದಿದೆ. ರಾಜ್ಯದಲ್ಲಿ ಚುನಾವಣೆ ನಡೆಸುವ ಬಗ್ಗೆ ಏಪ್ರಿಲ್ 15ರೊಳಗೆ ತೀರ್ಮಾನ ಪ್ರಕಟಿಸುವುದಾಗಿ ಈಗಾಗಲೇ ಚುನಾವಣಾ ಆಯೋಗ ಹೇಳಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ. ಈಗಾಗಲೇ ಚುನಾವಣಾ ಆಯೋಗವು ಮೇ ತಿಂಗಳಲ್ಲೇ ಚುನಾವಣೆ ನಡೆಸುವ ನಿಟ್ಟಿನಲ್ಲಿ ತೀವ್ರಗತಿಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳನ್ನು ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಹೈಕಮಾಂಡ್ ಈ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

2004ರ ಅಸೆಂಬ್ಲಿ ಚುನಾವಣೆಗಳ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಕೈಜೋಡಿಸಿ ಸರಕಾರ ರಚಿಸಬೇಕಾಗಿ ಬಂದ ಬಳಿಕ ಎಸ್.ಎಂ.ಕೃಷ್ಣ ಅವರು ರಾಜ್ಯ ರಾಜಕೀಯದಿಂದ ದೂರ ಸರಿದು, ರಾಜ್ಯಪಾಲ ಹುದ್ದೆ ಸ್ವೀಕರಿಸಿದ್ದರು.

ಆದರೆ ಕೃಷ್ಣ ಅವರಿಗೆ ರಾಜ್ಯ ಕಾಂಗ್ರೆಸಿನಲ್ಲಿ ಯಾವ ಸ್ಥಾನ, ಜವಾಬ್ದಾರಿ ನೀಡಲಾಗುತ್ತದೆ ಎಂಬುದು ಇನ್ನೂ ನಿಖರವಾಗಿಲ್ಲ. ಅವರನ್ನು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತದೆಯೇ ಅಥವಾ ಅವರಿಗೆ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸುವ ನೇತೃತ್ವ ನೀಡಲಾಗುತ್ತದೆಯೇ ಎಂಬುದು ಖಚಿತವಾಗಿಲ್ಲ.
ಮತ್ತಷ್ಟು
ಏಪ್ರಿಲ್ 15ರೊಳಗೆ ಚುನಾವಣಾ ದಿನಾಂಕ ಪ್ರಕಟ
ತೋಟಗಾರಿಕಾ ಅಭಿವೃದ್ಧಿಗೆ ಕೇಂದ್ರದಿಂದ 1200ಕೋ. ನೆರವು
ವ್ಯಕ್ತಿಯ ಕೊಂದು ನಗ-ನಗದು ದೋಚಿದ ದರೋಡೆಕೋರರು
ಮುಂದುವರಿದೆ ಕರವೇ ಪ್ರತಿಭಟನೆ
ಬೆಳಗಾವಿ: ಕನ್ನಡಿಗನಿಗೆ ಮೇಯರ್ ಪಟ್ಟ
ರಾಜ್ಯದಲ್ಲಿ ಮೇಯಲ್ಲೇ ಚುನಾವಣೆ