ಆಟೋರಿಕ್ಷಾ ಚಾಲಕನೋರ್ವನನ್ನು ನಿರ್ಜನ ಸ್ಥಳವೊಂದಕ್ಕೆ ಕರೆದೊಯ್ದ ದುಷ್ಕರ್ಮಿಗಳು ಅವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉಲ್ಲಾಳದಿಂದ ವರದಿಯಾಗಿದೆ. ಇದರಿಂದ ಉಲ್ಲಾಳದ ಸುತ್ತಮುತ್ತ ಬುಧವಾರ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಸುದ್ದಿಮೂಲಗಳು ತಿಳಿಸಿವೆ.
ಮೃತನನ್ನು ಲ್ಯಾನ್ಸಿ ಡಿಸೋಜಾ ಎಂದು ಗುರುತಿಸಲಾಗಿದ್ದು ಈತ ನಿತ್ಯಾಧರ ನಗರದ ನಿವಾಸಿಯೆಂದು ತಿಳಿದುಬಂದಿದೆ. ಕೊಲೆಗೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ ಹಣದ ವಿಚಾರ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಬಾಡಿಗೆಗೆ ರಿಕ್ಷಾವನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಚಾಲಕನನ್ನು ಇಂದು ಬೆಳಗ್ಗೆ ಇಲ್ಲಿನ ಬಬ್ಬುಕಟ್ಟೆ ಸಮೀಪದಲ್ಲಿರುವ ಪೆರ್ಮನ್ನೂರು ಗ್ರಾಮದ ನಿರ್ಜನ ಪ್ರದೇಶವೊಂದಕ್ಕೆ ಕರೆತಂದಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಪರೀಶೀಲನೆಯನ್ನು ನಡೆಸಿದ್ದು, ಲಭ್ಯವಾಗಿರುವ ಸುಳಿವಿನ ಆಧಾರದ ಮೇಲೆ ಸದ್ಯದಲ್ಲಿಯೇ ಆ ದುಷ್ಕರ್ಮಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
|