ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ತಮ್ಮ ಮಹಾರಾಷ್ಟ್ರ ರಾಜ್ಯಪಾಲ ಸ್ಥಾನಕ್ಕೆ ವಿದ್ಯುಕ್ತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಸಂಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಕೃಷ್ಣ ತಮ್ಮ ರಾಜೀನಾಮೆ ಸಲ್ಲಿಸಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲೇ ನಡೆಯುವುದು ಬಹುತೇಕ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಕೃಷ್ಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನೆ ಮೂಡಿಸಿದೆ.
ಬೆಂಗಳೂರಿನಲ್ಲಿದ್ದ ಕೃಷ್ಣ ಅವರಿಗೆ ಮಂಗಳವಾರ ರಾತ್ರಿ ಹೈಕಮಾಂಡ್‌ನಿಂದ ಬುಲಾವ್ ಬಂದಿದ್ದು, ಅವರು ದೆಹಲಿಗೆ ತೆರಳಿದ್ದರು. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವಂತೆ ಕೃಷ್ಣರಿಗೆ ಸೋನಿಯಾ ಗಾಂಧಿ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದೆ. ಈಗಾಗಲೇ ಚುನಾವಣಾ ಆಯೋಗವು ಮೇ ತಿಂಗಳಲ್ಲೇ ಚುನಾವಣೆ ನಡೆಸುವ ನಿಟ್ಟಿನಲ್ಲಿ ತೀವ್ರಗತಿಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳನ್ನು ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ಹೈಕಮಾಂಡ್ ಈ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
2004ರ ಅಸೆಂಬ್ಲಿ ಚುನಾವಣೆಗಳ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಕೈಜೋಡಿಸಿ ಸರಕಾರ ರಚಿಸಬೇಕಾಗಿ ಬಂದ ಬಳಿಕ ಎಸ್.ಎಂ.ಕೃಷ್ಣ ಅವರು ರಾಜ್ಯ ರಾಜಕೀಯದಿಂದ ದೂರ ಸರಿದು, ರಾಜ್ಯಪಾಲ ಹುದ್ದೆ ಸ್ವೀಕರಿಸಿದ್ದರು.
ಡಿಕೆಶಿ, ಧರ್ಮಸಿಂಗ್ ಸ್ವಾಗತ ಕೃಷ್ಣ ಅವರು ರಾಜ್ಯರಾಜಕಾರಣಕ್ಕೆ ಮರಳುವ ಕುರಿತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. 1999ರ ಚುನಾವಣೆ ವೇಳೆ ಕಾಂಗ್ರೆಸ್ ಪಾಂಚಜನ್ಯ ಊದಿ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಲು ಕಾರಣವಾಗಿದ್ದ 'ನೀಲಿಕಣ್ಣಿನ ಹುಡುಗ' ಡಿ.ಕೆ. ಶಿವಕುಮಾರ್ ಕೃಷ್ಣರ ಆಗಮನದ ಕುರಿತು ನೀಡಿರುವ ಪ್ರತಿಕ್ರಿಯೆಯಲ್ಲಿ, "ಕೃಷ್ಣ ರಾಜ್ಯದ ಜನತೆಗಾಗಿ ತನ್ನ ಅತ್ಯುನ್ನತ ಹುದ್ದೆ ತೊರೆಯುತ್ತಿದ್ದಾರೆ. ಇದನ್ನು ಜನತೆ ಗಮನದಲ್ಲಿರಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಕೃಷ್ಣ ರಾಜ್ಯ ರಾಜಕೀಯ ಪ್ರವೇಶಿಸುವುದರಿಂದ ಪ್ರದೇಶ ಕಾಂಗ್ರೆಸ್ ಪಕ್ಷ ಬಲವರ್ಧನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅಭಿಪ್ರಾಯಿಸಿದ್ದಾರೆ
|