ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿರುವ ಎಸ್.ಎಂ.ಕೃಷ್ಣ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಕ್ಕೆ ಮರಳುವೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಚುನಾವಣಾ ಆಯೋಗ ಭೇಟಿ ಮಾಡಿ ತೆರಳುತ್ತಿರುವಂತೆ ಕೃಷ್ಣ ರಾಜಕೀಯ ಪ್ರವೇಶ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 2004ರ ಚುನಾವಣೆಯಲ್ಲಿ ಕೃಷ್ಣ ನಾಯಕತ್ವದ ಕಾಂಗ್ರೆಸ್, ರಾಜ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಆ ಸಂದರ್ಭದಲ್ಲಿ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಕೈಜೋಡಿಸಬೇಕಾದ ಅನಿವಾರ್ಯತೆ ಉಂಟಾಗಿದ್ದ ಹಿನ್ನೆಲೆಯಲ್ಲಿ ದೇವೇಗೌಡರ ವೈರಿಯಾಗಿರುವ ಕೃಷ್ಣರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿಸಿ ರಾಜ್ಯ ರಾಜಕಾರಣದಿಂದ ದೂರ ಇರಿಸಲಾಗಿತ್ತು.
ಈಗ ಮತ್ತೆ ಬಿಜೆಪಿ-ಜೆಡಿಎಸ್ ಜಗಳದಲ್ಲಿ ಕಾಂಗ್ರೆಸ್‌ಗೆ ಲಾಭ ಅನ್ನುವ ಸನ್ನಿವೇಶದಲ್ಲಿ, ಕೃಷ್ಣಾಗಮನ ಸಹಜವಾಗಿ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಇರಿಸುಮುರಿಸು ತಂದಿಟ್ಟಿದೆ. ಬಲಗೈ ಬಂಟನಾಗಿರುವ ಡಿಕೆಶಿಯಂತಹವರಿಗೆ ಇದು ಸಂತಸದ ವಿಚಾರವಾಗಿದ್ದರೂ, ನಾಯಕರಿಂದಲೇ ತುಂಬಿ ತುಳುಕುತ್ತಿರುವ ರಾಜ್ಯ ಕಾಂಗ್ರೆಸ್‌ಗೆ ಕೃಷ್ಣ ಮರಳಿದರೆ ತಮಗೆ ಪಟ್ಟ ಬರದು ಎಂಬ ಅಭಿಪ್ರಾಯ ಕಾಂಗ್ರೆಸ್‌ನ ಕೆಲ ನಾಯಕರದ್ದು.
ಈ ಬೆಳವಣಿಗೆ ಜೆಡಿಎಸ್‌ಗೆ ಬರಸಿಡಿಲಿನಂತಾಗಿದೆ. ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಮತಗಳು ತಮ್ಮ ತೆಕ್ಕೆಗೆ ಎಂದು ಅರಿತುಕೊಂಡಿದ್ದ ಜೆಡಿಎಸ್, ಕೃಷ್ಣ ಆಗಮನ ವಿಚಲಿತವಾಗಿದೆ. ಒಟ್ಟಾರೆಯಾಗಿ ಹಲವು ಸಮಸ್ಯೆಗಳ ಗೂಡಾಗಿರುವ ಕಾಂಗ್ರೆಸ್ ಹಾಗೂ ರಾಜ್ಯ ರಾಜಕೀಯದಲ್ಲಿ ಕೃಷ್ಣ ಜಾದೂ ಎಷ್ಟರ ಮಟ್ಟಿಗೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
|