ದೇವನ ಹಳ್ಳಿಯಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಇದರಿಂದಾಗಿ ಎಚ್ಎಎಲ್ ವಿಮಾನ ನಿಲ್ದಾಣದ ಮುಂದುವರಿಯುವಿಕೆಯು ತ್ರಿಶಂಕು ಸ್ಥಿತಿಗೆ ತಳ್ಳಲ್ಪಟ್ಟಿದೆ.
ದೇವನಹಳ್ಳಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸುಮಾರು 45 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಈ ನಿಟ್ಟಿನಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿಯೂ ಕಾರ್ಯ ನಿರ್ವಹಿಸುವುದು ಅಸಾಧ್ಯ ಹಾಗೂ ಅದು ಅನಗತ್ಯ ಎಂದು ಕೇಂದ್ರ ಸರ್ಕಾರಿ ವಕೀಲ ಅರವಿಂದ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಲ್ಲದೆ, ಎಚ್ಎಎಲ್ ವಿಮಾನ ನಿಲ್ದಾಣದ ಬಳಕೆ ಮುಂದುವರಿದರೆ ಆರ್ಥಿಕ ಹೊರೆ ಹೆಚ್ಚುವ ಕಾರಣ ಅದರ ಕಾರ್ಯವನ್ನು ಶೀಘ್ರವೇ ಸ್ಥಗಿತಗೊಳಿಸಬೇಕೆಂದು ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರದ ಅಭಿವೃದ್ದಿಯ ದೃಷ್ಟಿಯಿಂದ ಎರಡು ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುವುದು ಸೂಕ್ತ ಎಂದು ಸಾರಿಗೆ ಪ್ರವಾಸೋದ್ಯಮ ಸಂಸ್ಕೃತಿಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಎಚ್ಎಎಲ್ ವಿಮಾನವನ್ನು ಮುಂದುವರೆಸಬೇಕೆಂದು ಹೈಕೋರ್ಟ್‌ಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಕೇಂದ್ರ ಸರ್ಕಾರವು ಹೈಕೋರ್ಟ್ ಈ ಮನವಿಯನ್ನು ಮಾಡಿದೆ. ಮಾರ್ಚ್ 10ರಂದು ಈ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.
ನೂತನ ನಿಲ್ದಾಣದಲ್ಲಿ ಯಶಸ್ವಿ ಪ್ರಾಯೋಗಿಕ ಹಾರಾಟ ನೂತನವಾಗಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪ್ರಾಯೋಗಿಕ ವಿಮಾನವನ್ನು ಹಾರಾಟವು ಯಶಸ್ವಿಯಾಗಿ ನಡೆಸಲಾಗಿದೆ. ಮುಂಬೈನಿಂದ ಕಿಂಗ್ಫಿಷರ್ ವಿಮಾನವು ಯಶಸ್ವಿಯಾಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
|