ರಾಜ್ಯರಾಜಕಾರಕ್ಕೆ ಮರಳುವ ತೀವ್ರ ತುಡಿತದಿಂದ ತನ್ನ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ಎಸ್.ಎಂ.ಕೃಷ್ಣ ರಾಜ್ಯಕ್ಕೆ ಕಾಲಿಡುವ ಮೊದಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ದಟ್ಟವಾಗಿದೆ. ಕೃಷ್ಣ ಬರುವಿಕೆಗೆ ಕಾಂಗ್ರೆಸ್‌ನ ಒಂದು ವರ್ಗ ಸಂತಸ ಸೂಚಿಸಿದರೆ, ಇನ್ನೊಂದು ವರ್ಗ ವಿರೋಧಿಸುತ್ತಿದೆ.
ಕೃಷ್ಣಾಗಮನದ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ವರ್ತನೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಕೃಷ್ಣ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ, "ಈ ವಿಚಾರಕ್ಕೆ ಇಷ್ಟು ಮಹತ್ವ ಕೊಡುವ ಅಗತ್ಯವಿಲ್ಲ, ಹೈಕಮಾಂಡ್ ಆದೇಶದನ್ವಯ ರಾಜಕಾರಣಕ್ಕೆ ಮರಳಿದ್ದಾರೆ" ಎಂದು ಹೇಳಿರುವುದನ್ನು ಕೃಷ್ಣ ಬೆಂಬಲಿಗರು ಫ್ಯಾಕ್ಸ್ ಮೂಲಕ ಹೈಕಮಾಂಡ್‌ಗೆ ರವಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಖರ್ಗೆ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಖರ್ಗೆಯವರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಮಧ್ಯೆ ಮಾರ್ಚ್ 14ಕ್ಕೆ ರಾಜ್ಯ ಪ್ರವೇಶಿಸಲಿರುವ ಕೃಷ್ಣ ಪ್ರದೇಶ ಕಾಂಗ್ರೆಸಿನ ಎಲ್ಲಾ ಮುಖಂಡರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಆ ಬಳಿಕವಷ್ಟೇ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಕೃಷ್ಣಾಗಮನಕ್ಕೆ ಮೊದಲೇ ರಾಜ್ಯ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರಿಗೆ ಅತೃಪ್ತಿ ಮೂಡಿದಂತೂ ಸಹಜ. ಮೇಲ್ನೋಟಕ್ಕೆ ಇವರು ಕೃಷ್ಣರನ್ನು ಸ್ವಾಗತಿಸುತ್ತಾರಾದರೂ, ಅವರ ಮರಳುವಿಕೆಯಿಂದ ಪಕ್ಷದಲ್ಲಿ ತಮ್ಮ ವರ್ಚಸ್ಸು, ಪ್ರಭಾವ ಕುಂಠಿತವಾಗಬಹುದೆಂಬ ಲೆಕ್ಕಚಾರದಲ್ಲಿ ತೊಡಗಿದ್ದಾರೆ.
|