ಕರ್ನಾಟಕದ ಗಡಿಭಾಗಗಳಲ್ಲಿರುವ ಕಾರವಾರ, ಬೆಳಗಾವಿ, ಬೀದರ್, ಭಾಲ್ಕಿ ಇವೇ ಮೊದಲಾದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಿಪ್ಪಾಣಿ ನಗರಸಭೆ ಅಂಗೀಕರಿಸಿರುವ ನಿರ್ಣಯವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಜಭವನದ ಮುಂಭಾಗ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡರು ಮಾತನಾಡುತ್ತಾ ಮರಾಠಿ ಧ್ವಜಕ್ಕೆ ಪೂಜೆ ಮಾಡಿ ಕನ್ನಡ ವಿರೋಧಿ ನಿಲುವನ್ನು ಅನುಸರಿಸಿರುವ ನಗರಸಭಾ ಅಧ್ಯಕ್ಷರಾದ ಶುಭಾಂಗಿ ಜೋಷಿಯವರನ್ನು ಕೂಡಲೇ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿದರು.
ಇವರಷ್ಟೇ ಅಲ್ಲದೇ ನಗರಸಭಾ ಸದಸ್ಯರೂ ಕೂಡ ನಿರ್ಣಯವನ್ನು ಬೆಂಬಲಿಸಿ ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ. ಅವರ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದೂ ಈ ಸಂದರ್ಭದಲ್ಲಿ ನಾರಾಯಣಗೌಡ ಒತ್ತಾಯಿಸಿದರು.
ಗಡಿ ವಿವಾದಕ್ಕೆ ಸಂಬಂಧಿಸಿ ಮಹಾಜನ್ ವರದಿಯೇ ಅಂತಿಮವಾಗಿದ್ದರೂ ಇದನ್ನು ಒಪ್ಪದೇ ವಿನಾಕಾರಣ ವಿವಾದ ಉಂಟುಮಾಡಲಾಗುತ್ತಿದೆ. ಇಂಥ ಅನಗತ್ಯ ವಿವಾದಗಳಿಗೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಬೆಳಗಾವಿಯಷ್ಟೇ ಅಲ್ಲದೇ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
|