ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗಾಗಲೇ ನಿಗದಿಯಾಗಿರುವಂತೆ ಇದೇ ತಿಂಗಳ 28ಕ್ಕೆ ಉದ್ಘಾಟನೆಗೊಳ್ಳಲಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ವಿಮಾನಗಳ ಹಾರಾಟವನ್ನು ಸ್ಪಲ್ಪಕಾಲ ಮುಂದೂಡಲಾಗುವುದು ಎಂದು ಹೇಳಲಾಗಿದೆ.
ಕೆಲವೊಂದು ಪರೀಕ್ಷಾರ್ಥ ಕಾರ್ಯಗಳು ಬಾಕಿ ಇರುವುದರಿಂದ ಉದ್ಘಾಟನೆಯಾದ ತಕ್ಷಣವೇ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ವಿಮಾನ ಸಂಚಾರ ನಿಯಂತ್ರಣ ಸಮಿತಿ ತಿಳಿಸಿದೆ. ಅಷ್ಟೇ ಅಲ್ಲದೆ, ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸೂಕ್ತ ರಸ್ತೆ ನಿರ್ಮಾಣವೂ ನಡೆದಿಲ್ಲವಾದ್ದರಿಂದ ಮುಂದೂಡಿಕೆ ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.
ಆದರೆ ಈ ವರದಿಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬ್ರೂನರ್ ತಳ್ಳಿ ಹಾಕಿದ್ದಾರೆ. ಪ್ರಾಯೋಗಿಕ ಹಾರಾಟಗಳ ವಿಶ್ಲೇಷಣೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ನಡೆಸುತ್ತದೆ. ನ್ಯೂನತೆಗಳು ಕಂಡುಬಂದಲ್ಲಿ ಸಚಿವಾಲಯ ತಪಾಸಣೆ ನಡೆಸುತ್ತದೆ. ಸಚಿವಾಲಯ ಇನ್ನೊಂದು ವಾರದಲ್ಲಿ ಲೈಸೆನ್ಸ್ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ನಿಲ್ದಾಣದ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಕೆಲ ವಾರಗಳಲ್ಲಿ ನಿಲ್ದಾಣದ ಕ್ಷಮತೆಯನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಭದ್ರತಾ ದೃಷ್ಟಿ ಹಾಗೂ ಸುಧಾರಣಾ ಕ್ರಮದ ಅನುಷ್ಠಾನದ ಕಾರಣದಿಂದ ಇದು ಅತ್ಯಗತ್ಯವಾಗಿರುತ್ತದೆ. ಇದನ್ನು ಹೊರತುಪಡಿಸಿ ವಿಮಾನ ಹಾರಾಟಕ್ಕೆ ಸಂಬಂಧಿಸಿ ವಿಳಂಬವಾಗಲೀ, ಮುಂದೂಡಿಕೆಯಾಗಲೀ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|