ತುಳುರಾಜ್ಯ ಹೋರಾಟಕ್ಕೆ ಸ್ಪಂದಿಸದವರನ್ನು ತುಳುನಾಡಿನಿಂದ ಹೊರಕಳಿಸಲಾಗುವುದು ಎಂಬ ಹರಿಕೃಷ್ಣ ಪುನರೂರರ ಹೇಳಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಖಂಡಿಸಿದೆ.
ತುಳುವಿನ ಬಗೆಗೆ ಅಭಿಮಾನವಿರಿಸಿಕೊಳ್ಳುವ ಬದಲು ಇಂತಹ ಅಂಧಾಭಿಮಾನದ ಹೇಳಿಕೆಗಳು ಪುನರೂರರಿಗೆ ಶೋಭೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವೇದಿಕೆ, ಹೀಗೆ ಹೇಳಿಕೆ ನೀಡುವುದರಿಂದ ಕರಾವಳಿ ಕರ್ನಾಟಕದ ವಿವಿಧ ಭಾಷೆಗಳನ್ನಾಡುವ ಜನರ ಮಧ್ಯೆ ಆಂತರಿಕ ಕಲಹವನ್ನು ವಿನಾಕಾರಣ ಸೃಷ್ಟಿಸಿದಂತಾಗುತ್ತದೆ ಎಂದು ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್‌ನ ಘನತೆವೆತ್ತ ಸಂಘಟನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಪುನರೂರರು ಕನ್ನಡ ನಾಡು ನುಡಿಯ ಬೆಳವಣಿಗೆಗೆ ಸಂಬಂಧಿಸಿದ ಕೆಲಸ ಮಾಡಬೇಕೇ ಹೊರತು ವಿವಾದ ಸೃಷ್ಟಿಸಬಾರದು. ತುಳುವರಲ್ಲದವರನ್ನು ಹೊರದಬ್ಬುವ ಕೆಲಸ ಪ್ರಜಾತಂತ್ರ ವಿರೋಧಿ ಕ್ರಮವಾಗಬಲ್ಲದು ಎಂದು ವೇದಿಕೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರಾವಳಿ ಕರ್ನಾಟಕಕ್ಕೆ ಅಗತ್ಯ ಸೌಲಭ್ಯಗಳು ಸಿಗದಿದ್ದಾಗ ಇಂಥ ಹೇಳಿಕೆಗಳಿಗೆ ಚಾಲನೆ ಸಿಕ್ಕಿತ್ತು. ಅದರೆ ಇದೀಗ ಎಲ್ಲ ಸವಲತ್ತುಗಳೂ ಸಿಗುತ್ತಿವೆ, ಜೊತೆಗೆ ಏಕೀಕರಣಕ್ಕಾಗಿ ಹೋರಾಟವೂ ನಡೆಯುತ್ತಿದೆ. ಹೀಗಿರುವಾಗ ಪ್ರತ್ಯೇಕತೆಯ ಕೂಗು ರಾಜ್ಯದ ಯಾವ ಭಾಗದಲ್ಲೂ ಸಲ್ಲದು ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
|