ವಿಧಾನಸಭಾ ಚುನಾವಣಾ ಘೋಷಣಎ ಇನ್ನೇನು ಹೊರಬೀಳಲಿದೆ ಎಂಬಂತ ಸ್ಥಿತಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗೆ ಸಜ್ಜಾಗುತ್ತಿದ್ದು, ಬಿಜೆಪಿಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಾಗ್ಝರಿಯ ಮೂಲಕ ಚುನಾವಣಾ ಕಣದಲ್ಲಿ ಪ್ರಭಾವ ಬೀರಲು ಸಿದ್ಧತೆ ನಡೆಸಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ತಿಂಗಳ 17ರಂದು ರಾಜ್ಯಕ್ಕೆ ಆಗಮಿಸಲಿದ್ದು, ಹುಬ್ಬಳ್ಳಿಯಲ್ಲಿ ಆಯೋಜಿಸಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ.
ಇದರ ನಡುವೆ, ಮಾರ್ಚ್ 13ರಿಂದ 15ರವರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಜಿಲ್ಲಾ ಪ್ರಮುಖರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಚುನಾವಣಾ ಸಿದ್ಧತೆಗಳ ಬಗ್ಗೆ ಪ್ರತ್ಯೇಕವಾಗಿ ಎಲ್ಲಾ ಜಿಲ್ಲಾ ಪ್ರಮುಖರ ಜೊತೆ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು, ರಾಜ್ಯ ಬಿಜೆಪಿ ನಾಯಕರ ಸಭೆ ಕರೆದು, ಇಲ್ಲಿಯವರೆಗಿನ ಚುನಾವಣಾ ಸಿದ್ಧತೆಗಳು ಹಾಗೂ ಮುಂದಿನ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಭೆ ಕರೆದು ಚರ್ಚಿಸಲಿದ್ದು, ಕಳೆದ ವಿಧಾನಸಭೆಯಲ್ಲಿ ಗೆಲುವು ಸಾಧಿಸಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
|