ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚುವ ಕುರಿತು ವಿವರಣೆ ನೀಡಬೇಕೆಂದು ಹೈಕೋರ್ಟ್ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಎಚ್ಎಎಲ್‌ಗೆ ನೋಟಿಸ್ ಜಾರಿ ಮಾಡಿದೆ.
ನೂತನವಾಗಿ ನಿರ್ಮಾಣವಾಗುತ್ತಿರುವ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಬಳಿಕ ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚುವ ಬಗ್ಗೆ ಸರ್ಕಾರ ಹಾಗೂ ಎಚ್ಎಎಲ್ ಪ್ರಾಧಿಕಾರ ತೀರ್ಮಾನಿಸಿದ್ದನ್ನು ಪ್ರಶ್ನಿಸಿ, ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಹೈಕೋರ್ಟ್ ಈ ಆದೇಶವನ್ನು ಹೊರಡಿಸಿದ್ದು, 25ರಂದು ಮುಂದಿನ ವಿಚಾರಣೆಯನ್ನು ಕೈಗೊಳ್ಳಲಿದೆ.
ಮೂವರು ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಯಲ್ಲಿ, ಎಚ್ಎಎಲ್ ಮುಚ್ಚುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಅಲ್ಲದೆ, ನಗರದಿಂದ 30 ಕಿ.ಮೀ. ದೂರದಲ್ಲಿರುವ ನೂತನ ವಿಮಾನ ನಿಲ್ದಾಣಕ್ಕೆ ಹೋಗಲು ಹರಸಾಹಸ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಎಎಲ್ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿಸಲಾಗಿದೆ.
ಈ ಮಧ್ಯೆ, ಸರ್ಕಾರವು ನೂತನ ವಿಮಾನ ನಿಲ್ದಾಣದಲ್ಲಿ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳ ಕಾರ್ಯವು ಬಹುತೇಕ ಪೂರ್ಣಗೊಂಡಿದ್ದು, ಮಾರ್ಚ್ 30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದೆ.
|