ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಕ್ರಮಗಳು ನಿರೀಕ್ಷಿತ ಗುಣಮಟ್ಟದಲ್ಲಿ ಇಲ್ಲದಿರುವುದರಿಂದ ಉದ್ಘಾಟನೆಯನ್ನು ಇನ್ನೂ ಎರಡು ಅಥವಾ ನಾಲ್ಕು ವಾರ ಮುಂದೂಡಲು ನಿರ್ಧರಿಸಲಾಗಿದೆ.
ವಿಮಾನ ನಿಲ್ದಾಣ ಕಾಮಗಾರಿಗಳು ಇನ್ನೂ ಪೂರ್ತಿಯಾಗಿ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಿಸಬಾರದೆಂಬ ದೃಷ್ಟಿಯಿಂದ ನಿಲ್ದಾಣದ ಉದ್ಘಾಟನೆಯನ್ನು ಮುಂದೂಡಲು ನಿರ್ಧರಿಸಿದ್ದು, ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಮುಖ್ಯವಾಗಿ ವಾಯುಯಾನ ಟ್ರಾಫಿಕ್ ನಿಯಂತ್ರಿಸುವ (ಎಟಿಸಿ) ಟವರ್‌ನ ಗುಣಮಟ್ಟ ಸಮರ್ಪಕವಾಗಿಲ್ಲ ಎಂದು ನಿರ್ದೇಶನಾಲಯ ತನ್ನ ವರದಿಯಲ್ಲಿ ಸಚಿವಾಲಯಕ್ಕೆ ತಿಳಿಸಿದೆ. ಅಲ್ಲದೆ, ಬೇಸಿಗೆಯ ಸಮಯದಲ್ಲಿ ಪ್ರತಿನಿತ್ಯ ಸುಮಾರು 480 ಹಾಗೂ ಚಳಿಗಾಲದಲ್ಲಿ 550 ವಿಮಾನದ ಹಾರಾಟವನ್ನು ನೀರೀಕ್ಷಿಸಲಾಗಿದೆ. ಈ ಎಲ್ಲಾ ಬೆಳವಣಿಗೆಯಲ್ಲಿ ನಿಲ್ದಾಣದಲ್ಲಿನ ಗುಣಮಟ್ಟ ಸರಿಯಾದ ರೀತಿಯಲ್ಲಿ ಹೊಂದಿರಬೇಕೆಂದು ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರ ಅಧಿಕೃತವಾಗಿ ಪ್ರಕಟಗೊಳ್ಳಲಿದ್ದು, ಏಪ್ರಿಲ್ ಎರಡನೇ ಅಥವಾ ನಾಲ್ಕನೇ ವಾರದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಈ ಮಧ್ಯೆ ಮಾರ್ಚ್ 30ಕ್ಕೆಂದು ನಿಗದಿಯಾಗಿರುವ ಉದ್ಘಾಟನೆಗೆ ಪ್ರಧಾನಿ ಮನಮೋಹನ್ ಸಿಂಗ್ ಒಪ್ಪಿಗೆ ಸೂಚಿಸಿದ್ದು, ಈಗ ವಿಳಂಬವಾಗಿರುವುದರಿಂದ ಮತ್ತೊಮ್ಮೆ ದಿನಾಂಕವನ್ನು ನಿಗದಿಪಡಿಸಿಕೊಳ್ಳಬೇಕಿದೆ ಎಂದು ತಿಳಿದು ಬಂದಿದೆ.
|