ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯ ಕೃತಿಸ್ವಾಮ್ಯ ಹಕ್ಕು ಪಡೆಯದೆ 70 ಸಾವಿರ ಪ್ರತಿಗಳನ್ನು ಮುದ್ರಿಸಿದ್ದಕ್ಕಾಗಿ, ಮಾಲಿನಿ ಮಲ್ಯ ಅವರು ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಕಾರಂತರ ಚೋಮನದುಡಿ ಕಾದಂಬರಿಯನ್ನು ಕೇರಳದ ಕುಮರನ್ ಎಂಬುವವರು 1988ರಲ್ಲಿ ಮಲಯಾಳಂಗೆ ಅನುವಾದಿಸಿದ್ದು ಇದಕ್ಕೆ ಕೇರಳ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ಲಭಿಸಿತ್ತು. ಕೇರಳ ಸಾಹಿತ್ಯ ಅಕಾಡೆಮಿ ಇದರ ಕಾಪಿರೈಟ್ ಕೇಳಿದಾಗ ಕಾರಂತರು ನೀಡಿರಲಿಲ್ಲ. ಆದರೆ ಗ್ರಂಥದ ಮರುಮುದ್ರಣ ಮಾಡಲಾಗಿತ್ತಲ್ಲದೇ, ಕಾರಂತರ ಮರಣಾನಂತರ ಚೋಮನದುಡಿ ಕಾದಂಬರಿಯನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯ ಪಿಯುಸಿ ಪಠ್ಯ ಪುಸ್ತಕ ಮಾಡಿ 70 ಸಾವಿರ ಪ್ರತಿಗಳನ್ನು ಮುದ್ರಿಸಿತ್ತು. ಇದಕ್ಕೆ ಅವರು ಕಾಪಿರೈಟ್ ಪಡೆದಿರಲಿಲ್ಲವಾದ್ದರಿಂದ ಕಾಪಿರೈಟ್ ಹಕ್ಕು ಹೊಂದಿರುವ, ಕಾರಂತರ ಸಹಾಯಕಿಯಾಗಿದ್ದ ಮಾಲಿನಿ ಮಲ್ಯ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾರಂತರು 1994ರಲ್ಲಿ ರಚಿಸಿದ ವಿಲ್ ಅನುಸಾರ ತಮ್ಮ ಗ್ರಂಥಗಳ ಕಾಪಿರೈಟ್, ಗೌರವಧನ ಮೊದಲಾದವುಗಳಿಗೆ ಸಂಬಂಧಿಸಿದಂತೆ ತನ್ನ ಸಹಾಯಕಿಯಾಗಿದ್ದ ಮಾಲಿನಿ ಮಲ್ಯರವರನ್ನೇ ಹಕ್ಕುದಾರರನ್ನಾಗಿ ಮಾಡಿದ್ದರು. ಇದರ ಅನುಸಾರ, ತಮ್ಮಿಂದ ಕಾಪಿರೈಟ್ ಪಡೆಯದೆ ಕಾದಂಬರಿಯ 70 ಸಾವಿರ ಪ್ರತಿಗಳನ್ನು ಮುದ್ರಿಸಿ 20 ರೂ.ಗಳ ದರ ನಿಗದಿ ಮಾಡಿದ್ದ ಕ್ಯಾಲಿಕಟ್ ವಿಶ್ವವಿದ್ಯಾಲಯ ತಮಗೆ 9ಲಕ್ಷ ರೂ.ಗಳಿಗೂ ಹೆಚ್ಚು ಪರಿಹಾರ ಮತ್ತು 1998ರಿಂದ ಅನ್ವಯವಾಗುವಂತೆ ಶೇಕಡ 6ರ ದರದಲ್ಲಿ ಬಡ್ಡಿಯನ್ನೂ ಸೇರಿಸಿ ಕೊಡುವಂತೆ ಆದೇಶಿಸಬೇಕೆಂದು ನ್ಯಾಯಾಲಯದಲ್ಲಿ ಮಾಲಿನಿ ಮಲ್ಯ ಕೋರಿದ್ದಾರೆ.
ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಸ್.ಆರ್.ಬನ್ನೂರ್ ಮಠ ಮತ್ತು ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ ಗೌಡರವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 6ರವರೆಗೆ ಮುಂದೂಡಿದ್ದು ಅಷ್ಟರೊಳಗೆ ವಿಷಯವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸೂಚಿಸಿದೆ.
|