ವಿಪ್ರೋ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ನಿರುದ್ಯೋಗಿ ಯುವಕರಿಂದ ಹಣಪಡೆದು ವಂಚಿಸುತ್ತಿದ್ದ ಮಹಮದ್ ವುಲ್ಲಾ ಹುಸೇನ್ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯವನಾದ ಈತ, ತಾನು ವಿಪ್ರೋ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಎಂದು ಹೇಳಿಕೊಂಡು ನಿರುದ್ಯೋಗಿ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಇಂಟರ್‌ನೆಟ್‌ನಿಂದ ಡೌನ್ಲೋಡ್ ಮಾಡಿಕೊಂಡ ವಿಪ್ರೋ ಕಂಪನಿಯ ಲೋಗೋವನ್ನು ಬಳಸಿ ಲೆಟರ್‌ಹೆಡ್ ಸಿದ್ಧಪಡಿಸಿಕೊಂಡು ಕೆಲಸ ಕೊಡಿಸುವುದಾಗಿ ಅವರನ್ನು ನಂಬಿಸುತ್ತಿದ್ದ ಎಂದು ವಿಚಾರಣೆಯ ವೇಳೆಯಲ್ಲಿ ತಿಳಿದುಬಂದಿದೆ.
ಇದಾದ ನಂತರ ವಿಪ್ರೋ ಕಂಪನಿಗಳ ಸನಿಹಕ್ಕೆ ಕರೆದುಕೊಂಡು ಹೋಗಿ ನಿರುದ್ಯೋಗಿ ಯುವಕರಿಗೆ ನಂಬಿಕೆ ಹುಟ್ಟಿಸಿ ಅವರಿಂದ ಹಣ ಪಡೆಯುತ್ತಿದ್ದ. ಜೊತೆಗೆ ಈಗಾಗಲೇ ಹಲವರಿಗೆ ಕೆಲಸ ಕೊಡಿಸಿದ್ದೇನೆ ಎಂದು ಹೇಳುವ ನಕಲಿ ದಾಖಲೆಗಳನ್ನೂ ತೋರಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಖಚಿತ ಮಾಹಿತಿ ಪಡೆದ ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್ ರವಿಶಂಕರ್ ಹಾಗೂ ಸಿಬ್ಬಂದಿವರ್ಗದವರು, ಉಪ ಪೊಲೀಸ್ ಆಯುಕ್ತರಾದ ಬಿ.ಎನ್.ರೆಡ್ಡಿಯವರ ಮಾರ್ಗದರ್ಶನದಲ್ಲಿ ಮತ್ತು ಕಬ್ಬನ್ ಪಾರ್ಕ್ ಎಸಿಪಿ ಜಿತೇಂದ್ರನಾಥ್ ಉಸ್ತುವಾರಿಯಲ್ಲಿ ಜಾಲವನ್ನು ಹೆಣೆದು ಸದರಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
|