ಬೆಂಗಳೂರು: ಕುಡಿಯುವ ನೀರು ಪೂರೈಕೆಗಾಗಿ ತಮಿಳು ನಾಡು ಸರಕಾರ ಕೈಗೆತ್ತಿಕೊಂಡಿರುವ ಹೊಗೇನಕಲ್ ಯೋಜನೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಉಚ್ಚನ್ಯಾಯಾಲಯ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೊಸೆಫ್ ಮತ್ತು ನ್ಯಾಯಮೂರ್ತಿ ರವಿ ಮಳಿಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸಿ. ಜೆ ಗೊವಿಂದ ರಾಜ್ ಮತ್ತು ಇತರ ಮೂವರು ಸಲ್ಲಿಸಿದ್ದ ಮನವಿ ಅರ್ಜಿಯನ್ನು ತಿರಸ್ಕರಿಸಿ, ಯೋಜನೆ ತಡೆಗೆ ಸಂಬಂಧಿಸಿದಂತೆ ಸರಕಾರದೊಂದಿಗೆ ವ್ಯವಹರಿಸಿ ಎಂದು ನಿರ್ದೇಶಿಸಿತು.
ಈ ಯೋಜನೆಯ ಕುರಿತು ತಲ ಎತ್ತಿರುವ ವಿಚಾರಗಳು ಸೂಕ್ಷ್ಮವಾಗಿರುವುದರಿಂದ ಮತ್ತು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅರ್ಜಿದಾರರು ಸರಕಾರಕ್ಕೆ ಯೋಜನೆಯನ್ನು ತಡೆಯುವಂತೆ ಕೇಳಿಕೊಳ್ಳುವುದು ಸರಿ ಎಂದು ಹೇಳಿತು. ಒಂದು ವೇಳೆ ಸರಕಾರ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿದರೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು ನಂತರ ನ್ಯಾಯಾಲಯ ತಡೆಯಾಜ್ಞೆ ನೀಡುವ ಕುರಿತು ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಎರಡೂ ರಾಜ್ಯಗಳ ವತಿಯಿಂದ ಕೈಗೆತ್ತಿಕೊಳ್ಳುವ ಜಂಟಿ ಸಮೀಕ್ಷೆಯ ವರದಿ ಬರುವವರೆಗೆ ತಮಿಳುನಾಡು ಸರಕಾರ ಕೈಗೆತ್ತಿಕೊಂಡಿರುವ ಹೊಗೇನಕಲ್ ಕುಡಿಯುವ ನೀರಿನ ಯೋಜನೆಗೆ ತಡೆಯಾಜ್ಞೆ ನೀಡಬೇಕು ಎಂದು ಚಾಮರಾಜ್ ನಗರ ಜಿಲ್ಲೆಯ ಗೋವಿಂದ ರಾಜು ಮತ್ತಿತರರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
|